ಅಯೋಧ್ಯೆ: ಭವ್ಯ ರಾಮ ಮಂದಿರದಲ್ಲಿ ಮಂಗಳವಾರ (ನವೆಂಬರ್ 25) ನಡೆಯಲಿರುವ ಮಹತ್ವದ ‘ಧರ್ಮ ಧ್ವಜ’ (ಕೇಸರಿ ಬಾವುಟ) ಸಮಾರಂಭಕ್ಕಾಗಿ ಅಯೋಧ್ಯೆ ನಗರವು ಅಂತಿಮ ಹಂತದ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಈ ಸಮಾರಂಭವು ರಾಮ ಮಂದಿರದ ನಿರ್ಮಾಣ ಕಾರ್ಯದ ಮುಕ್ತಾಯವಾದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅಯೋಧ್ಯೆಗೆ ಭೇಟಿ ನೀಡಲಿದ್ದು, ರಾಮ ಮಂದಿರದ ಗೋಪುರದ ಮೇಲೆ ಕೇಸರಿ ಧ್ವಜವನ್ನು ಹಾರಿಸಲಿದ್ದಾರೆ.ಈ ಐತಿಹಾಸಿಕ ಕ್ಷಣಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ ಅವರು ಸಾಕ್ಷಿಯಾಗಲಿದ್ದಾರೆ.
ಪ್ರಧಾನಿ ಮೋದಿ ಅವರು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಧ್ವಜಾರೋಹಣ ಮಾಡಲಿದ್ದಾರೆ. ಇದಕ್ಕೂ ಮೊದಲು, ಅವರು ಮಂಗಳವಾರ ಬೆಳಗ್ಗೆ 10 ಗಂಟೆಗೆ ಸಪ್ತಮಂದಿರಕ್ಕೆ (ಮಹರ್ಷಿ ವಸಿಷ್ಠ, ವಿಶ್ವಾಮಿತ್ರ, ಅಗಸ್ತ್ಯ, ವಾಲ್ಮೀಕಿ, ದೇವಿ ಅಹಲ್ಯಾ, ನಿಷಾದರಾಜ ಗುಹ ಮತ್ತು ಮಾತಾ ಶಬರಿ ದೇವಾಲಯಗಳು) ಭೇಟಿ ನೀಡಲಿದ್ದಾರೆ.
ನಂತರ, ಶೇಷಾವತಾರ ಮಂದಿರ ಮತ್ತು ಮಾತಾ ಅನ್ನಪೂರ್ಣ ಮಂದಿರಗಳಿಗೆ ಭೇಟಿ ನೀಡಿ, ರಾಮ ದರ್ಬಾರ್ ಗರ್ಭಗೃಹದಲ್ಲಿ ಪೂಜೆ ಸಲ್ಲಿಸಿ, ಶ್ರೀರಾಮನ ಮೂರ್ತಿಯ ದರ್ಶನ ಪಡೆಯಲಿದ್ದಾರೆ.
ಭಕ್ತರ ದಂಡು ಮತ್ತು ಅಲಂಕಾರ:
ಈ ಭವ್ಯ ಸಮಾರಂಭವನ್ನು ಕಣ್ತುಂಬಿಕೊಳ್ಳಲು ದೇಶದ ಮೂಲೆ ಮೂಲೆಗಳಿಂದ ಭಕ್ತರ ದಂಡು ಅಯೋಧ್ಯೆಗೆ ಹರಿದು ಬರುತ್ತಿದೆ. ವರದಿಗಳ ಪ್ರಕಾರ, ಮಂದಿರವನ್ನು ಸುಮಾರು 100 ಕೆಜಿ ಹೂವುಗಳಿಂದ ಅಲಂಕರಿಸಲಾಗಿದೆ. ಧ್ವಜಾರೋಹಣ ಸಮಾರಂಭಕ್ಕೆ ಮುನ್ನ ಮಹಿಳೆಯರು ವಿಶೇಷ ಖಾದ್ಯಗಳನ್ನು ಸಿದ್ಧಪಡಿಸುತ್ತಿದ್ದಾರೆ.
ಈ ಧ್ವಜಾರೋಹಣವು ‘ಸಾಂಸ್ಕೃತಿಕ ಪರಂಪರೆ ಮತ್ತು ಆಧುನಿಕತೆಯ ಸಮ್ಮಿಲನದೊಂದಿಗೆ’ ಅಯೋಧ್ಯೆಯಲ್ಲಿ ಹೊಸ ಯುಗದ ಆರಂಭವನ್ನು ಗುರುತಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, “ನವೆಂಬರ್ 25, 2025 ರಂದು ಶ್ರೀ ಅಯೋಧ್ಯೆ ಧಾಮದ ಹೆಸರು ಇತಿಹಾಸದ ಪುಟಗಳಲ್ಲಿ ಮತ್ತೊಮ್ಮೆ ಸುವರ್ಣಾಕ್ಷರಗಳಲ್ಲಿ ದಾಖಲಾಗಲಿದೆ” ಎಂದು ಹೇಳಿದ್ದಾರೆ.
ಅಯೋಧ್ಯೆ ಮಾಸ್ಟರ್ ಪ್ಲಾನ್ 2031 ಮತ್ತು ವಿಷನ್ 2047 ರ ಅಡಿಯಲ್ಲಿ, ಧರ್ಮ ಧ್ವಜದ ಪುನಃಸ್ಥಾಪನೆಯು ಅಯೋಧ್ಯೆಯನ್ನು ಜಾಗತಿಕ ಆಧ್ಯಾತ್ಮಿಕ ಕೇಂದ್ರವಾಗಿ ಪರಿವರ್ತಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನವೆಂಬರ್ 25 ರಂದು ಧ್ವಜಾರೋಹಣಕ್ಕೆ ದಿನಾಂಕವನ್ನು ನಿಗದಿಪಡಿಸಲು ಹಿಂದೂ ಪುರಾಣದ ಕಾರಣವಿದೆ. ತ್ರೇತಾಯುಗದಲ್ಲಿ, ಇದೇ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಪಂಚಮಿಯಂದು(ಹುಣ್ಣಿಮೆಯ ಹಿಂದಿನ ಐದನೇ ದಿನ) ಶ್ರೀರಾಮ ಮತ್ತು ಸೀತಾ ದೇವಿಯ ವಿವಾಹ ನಡೆದಿತ್ತು. ಹೀಗಾಗಿ, ಈ ಶುಭ ವಿವಾಹ ಪಂಚಮಿಯ ದಿನವನ್ನೇ ಧ್ವಜಾರೋಹಣಕ್ಕೆ ಆಯ್ಕೆ ಮಾಡಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ