ಪೋಕ್ಸೊ ಪ್ರಕರಣ : ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಖುಲಾಸೆಗೊಳಿಸಿದ ಕೋರ್ಟ್‌

ಚಿತ್ರದುರ್ಗ: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ (POCSO case) ಸಂಬಂಧಿಸಿ ದಾಖಲಾಗಿದ್ದ ಮೊದಲ ಪೋಕ್ಸೊ ಕೇಸ್‌ನಲ್ಲಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರಿಗೆ ಬುಧವಾರ ಬಿಗ್‌ ರಿಲೀಫ್‌ ಸಿಕ್ಕಿದೆ.
 ಪೋಕ್ಸೊ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಸೇರಿ ಮೂವರನ್ನು ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯವು ನಿರ್ದೋಷಿಗಳು ಎಂದು  ಚಿತ್ರದುರ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ ಬುಧವಾರ ತೀರ್ಪು ನೀಡಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ಮುರುಘಾ ಶರಣರ ವಿರುದ್ಧ ಇನ್ನೊಂದು ಪ್ರಕರಣವು ವಿಚಾರಣೆಗೆ ಬಾಕಿ ಇದ್ದು, ಕರ್ನಾಟಕ ಹೈಕೋರ್ಟ್‌ ಅದಕ್ಕೆ ತಡೆ ನೀಡಿದೆ.
ಮಠದ ಹಾಸ್ಟೆಲ್‌ನಲ್ಲಿ ನೆಲೆಸಿದ್ದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ಸ್ವಾಮೀಜಿ ಅತ್ಯಾಚಾರ ಎಸಗಿದ್ದರು ಎಂದು ದೂರು ನೀಡಿದ್ದರು. ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ಎರಡನೇ ಜಿಲ್ಲಾ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗಂಗಾಧರ ಚನ್ನಬಸಪ್ಪ ಹಡಪದ ಅವರು ಬುಧವಾರ ತೀರ್ಪು ಪ್ರಕಟಿಸಿದರು. ನವೆಂಬರ್‌ 18ರಂದು ನ್ಯಾಯಾಲಯವು ತೀರ್ಪು ಕಾಯ್ದಿರಿಸಿತ್ತು.
“ಮೊದಲ ಆರೋಪಿ ಶಿವಮೂರ್ತಿ ಮುರುಘಾ ಶರಣರು, ಎರಡನೇ ಆರೋಪಿ ರಶ್ಮಿ, ನಾಲ್ಕನೇ ಆರೋಪಿ ಪರಮಶಿವಯ್ಯ ಅವರನ್ನು ನ್ಯಾಯಾಲಯವು ನಿರ್ದೋಷಿಗಳು ಎಂದು ತೀರ್ಪು ನೀಡಿದೆ” ಎಂದು ಸ್ವಾಮೀಜಿ ಪರ ವಕೀಲ ಕೆಬಿಕೆ ಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ 2022ರ ಆಗಸ್ಟ್‌ 26 ರಂದು ಮೈಸೂರಿನ ಠಾಣೆಯಲ್ಲಿ ಪೋಕ್ಸೊ ಕೇಸ್ ದಾಖಲಾಗಿತ್ತು. ವಿದ್ಯಾರ್ಥಿನಿಯರು ನೀಡಿದ್ದ ದೂರಿನ ಅನ್ವಯ 2022ರ ಆಗಸ್ಟ್‌ 26ರಂದು ಮೈಸೂರಿನ ನಜರಾಬಾದ್‌ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಸೆಕ್ಷನ್‌ಗಳಾದ 17, 5(ಎಲ್‌), 6 ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 376(2)(ಎನ್‌), 376(3), 149ರ ಅಡಿ ಮುರುಘಾ ಶರಣರು ಸೇರಿ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಚಿತ್ರದುರ್ಗ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿತ್ತು. ಅಲ್ಲಿ ಪೋಕ್ಸೊ ಕಾಯಿದೆ ಸೆಕ್ಷನ್‌ಗಳಾದ 17, 5(ಎಲ್‌), 6, ಐಪಿಸಿ ಸೆಕ್ಷನ್‌ಗಳಾದ 376(2)(ಎನ್‌), 376(3), 149 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿರ್ಮೂಲನೆ) ಕಾಯಿದೆ ಸೆಕ್ಷನ್‌ಗಳಾದ 3(1) (ಡಬ್ಲ್ಯು) (1)(2), 3(2) (V) ಅಡಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ಮೊದಲ ಆರೋಪಿಯಾಗಿದ್ದು, ಚಿತ್ರದುರ್ಗದಲ್ಲಿನ ಅಕ್ಕಮಹಾದೇವಿ ವಸತಿ ನಿಲಯದ ವಾರ್ಡನ್‌ ರಶ್ಮಿ ಎರಡನೇ ಹಾಗೂ ಮಠದ ಬಸವಾದಿತ್ಯ ಅವರು  ಮೂರನೇ ಆರೋಪಿಗಳಾಗಿದ್ದರು. ಮಠದ ಜೊತೆಗೆ ನಿಕಟ ಸಂಪರ್ಕ ಹೊಂದಿರುವ ಮೈಸೂರಿನ ಪರಮಶಿವಯ್ಯ ಮತ್ತು ವಕೀಲ ಗಂಗಾಧರಯ್ಯ ಅವರು ನಾಲ್ಕು ಮತ್ತು ಐದನೇ ಆರೋಪಿಗಳಾಗಿದ್ದರು. ಪೊಲೀಸರು ಶರಣರನ್ನು 2022ರ ಸೆಪ್ಟೆಂಬರ್ 1ರಂದು ಬಂಧಿಸಿದ್ದರು. ಶ್ರೀಗಳು 2023 ನವೆಂಬರ್ 16ರಂದು ಷರತ್ತು ಬದ್ಧ ಜಾಮೀನಿನ ಮೇಲೆ ಹೊರಗೆ ಬಂದಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್​ ಕೋರ್ಟ್, ಮೊದಲ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶರಣರು ನಿರ್ದೋಷಿ ಎಂದು ತೀರ್ಪು ಪ್ರಕಟಿಸಿದೆ. ಮತ್ತೊಂದು ಪ್ರಕರಣ ವಿಚಾರಣೆಗೆ ಬಾಕಿ ಇದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement