ನವದೆಹಲಿ: 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಅಮೆರಿಕಾದ ಗುಪ್ತಚರ ಸಂಸ್ಥೆ ಸಿಐಎ (CIA) ಮತ್ತು ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸ್ಸಾದ್ (Mossad) ಸಂಚು ರೂಪಿಸಿದ್ದವು ಎಂದು ಕಾಂಗ್ರೆಸ್‌ನ ಮಾಜಿ ಸಂಸದರಾದ ಕುಮಾರ ಕೇತ್ಕರ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಸಂವಿಧಾನ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇತ್ಕರ್, ಈ ಹೇಳಿಕೆ ನೀಡಿದ್ದಾರೆ.
2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 145 ಸ್ಥಾನಗಳನ್ನು ಗೆದ್ದಿತ್ತು. ಐದು ವರ್ಷಗಳ ನಂತರ ನಡೆದ 2009ರ ಸಾರ್ವತ್ರಿಕ ಚುನಾವಣೆಯಲ್ಲಿ 206 ಸ್ಥಾನಗಳನ್ನು ಗೆದ್ದು ಅಧಿಕಾರ ಉಳಿಸಿಕೊಂಡಿತ್ತು. ಈ ಟ್ರೆಂಡ್ ಪ್ರಕಾರ, 2014ರಲ್ಲಿ ಕಾಂಗ್ರೆಸ್ ಸುಮಾರು 250 ಸ್ಥಾನಗಳನ್ನು ಗೆದ್ದು ಸುಲಭವಾಗಿ ಅಧಿಕಾರದಲ್ಲಿ ಮುಂದುವರಿಯಬೇಕಿತ್ತು. ಆದರೆ, 2014ರ ಚುನಾವಣೆಯಲ್ಲಿ ಪಕ್ಷದ ಆಸನಗಳ ಸಂಖ್ಯೆ ಕೇವಲ 44ಕ್ಕೆ ಕುಸಿಯಿತು. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸ್ಥಾನಗಳ ಸಂಖ್ಯೆ ಯಾವುದೇ ಕಾರಣಕ್ಕೂ 206ಕ್ಕಿಂತ ಹೆಚ್ಚಾಗಬಾರದು ಎಂದು ನಿರ್ಧಾರವಾಗಿತ್ತು. ನಾವು ಕಾಂಗ್ರೆಸ್‌ನ ಸ್ಥಾನಗಳನ್ನು 206ರಿಂದ ಕೆಳಗೆ ತರದಿದ್ದರೆ, ನಮಗೆ ಇಲ್ಲಿ (ಭಾರತದಲ್ಲಿ) ಆಟ ಆಡಲು ಸಾಧ್ಯವಿಲ್ಲ’ ಎಂದುಕೊಂಡ ಕೆಲವು ಸಂಘಟನೆಗಳಿದ್ದವು. ಆ ಸಂಸ್ಥೆಗಳಲ್ಲಿ ಒಂದು ಸಿಐಎ ಮತ್ತು ಇನ್ನೊಂದು ಇಸ್ರೇಲ್‌ನ ಮೊಸ್ಸಾದ್,” ಎಂದು ಕೇತ್ಕರ್ ಹೇಳಿದರು.
ಈ ಎರಡು ಸಂಸ್ಥೆಗಳು ಭಾರತದಲ್ಲಿ ಏನಾದರೂ ಮಾಡಲೇಬೇಕು ಎಂದು ನಿರ್ಧರಿಸಿದ್ದವು. “ಒಂದು ವೇಳೆ ಸ್ಥಿರವಾದ ಕಾಂಗ್ರೆಸ್ ಸರ್ಕಾರ ಅಥವಾ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿದ್ದರೆ, ಅವುಗಳಿಗೆ ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಲು ಮತ್ತು ತಮ್ಮ ನೀತಿಗಳನ್ನು ಜಾರಿಗೊಳಿಸಲು ಸಾಧ್ಯವಾಗುತ್ತಿರಲಿಲ್ಲ” ಎಂದು ಕೇತ್ಕರ್ ಪ್ರತಿಪಾದಿಸಿದರು.
ದೆಹಲಿಯಲ್ಲಿ ತಮ್ಮ ನಿಯಂತ್ರಣದಲ್ಲಿರುವಂತಹ ಒಂದು ಅನುಕೂಲಕರವಾದ ಸರ್ಕಾರ ಇರಬೇಕು ಎಂಬುದು ಈ ಎರಡು ಗುಪ್ತಚರ ಸಂಸ್ಥೆಗಳ ಅಭಿಪ್ರಾಯವಾಗಿತ್ತು. ಅವರಿಗೆ ಬಹುಮತದ ಸರ್ಕಾರ ಬೇಕಿತ್ತು, ಆದರೆ ಅದು ಕಾಂಗ್ರೆಸ್‌ನ ಸರ್ಕಾರವಾಗಿರಬಾರದು. ಮೊಸ್ಸಾದ್ ಸಂಸ್ಥೆಯು ರಾಜ್ಯಗಳು ಮತ್ತು ವಿಧಾನಸಭಾ ಕ್ಷೇತ್ರಗಳ ಕುರಿತು ವಿವರವಾದ ಮಾಹಿತಿಯನ್ನು ಸಿದ್ಧಪಡಿಸಿತ್ತು. ಸಿಐಎ ಮತ್ತು ಮೊಸ್ಸಾದ್ ಬಳಿ ರಾಜ್ಯಗಳು ಮತ್ತು ಕ್ಷೇತ್ರಗಳ ಬಗ್ಗೆ ವಿವರವಾದ ಡೇಟಾ ಇದೆ ಎಂದು ಕೇತ್ಕರ್ ಆರೋಪಿಸಿದರು.
2014ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಅಸಮಾಧಾನ ಇತ್ತು ನಿಜ, ಆದರೆ ಅದು ಕಾಂಗ್ರೆಸ್‌ನ ಸಂಖ್ಯೆಯನ್ನು 206ರಿಂದ 44ಕ್ಕೆ ಇಳಿಸುವಷ್ಟು ದೊಡ್ಡದಾಗಿರಲಿಲ್ಲ. ಪಕ್ಷವು ವಿಪಕ್ಷದ ನಾಯಕನ ಸ್ಥಾನವನ್ನು ಸಹ ಪಡೆಯಲು ಸಾಧ್ಯವಾಗಲಿಲ್ಲ. “ಇದು ಜನರ ಜನಾದೇಶವಾಗಿರಲಿಲ್ಲ, ದೇಶಿ ಶಕ್ತಿಗಳ ಹಸ್ತಕ್ಷೇಪದಿಂದ ಆಗಿದೆ ಎಂದು ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ