ಸಹೋದರನ ಕೊಲೆ ಮಾಡಿ ಧರ್ಮ, ಹೆಸರು ಬದಲಿಸಿಕೊಂಡು 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಪರಾಧಿ ಕೊನೆಗೂ ಅಂದರ್…!

ಬರೇಲಿ (ಉತ್ತರ ಪ್ರದೇಶ): ಕಾಲ ಮತ್ತು ದಾಖಲೆಗಳಿಗೆ ಒಂದು ಸಾಮ್ಯತೆ ಇದೆ – ಅವು ಏನನ್ನೂ ಮರೆಯುವುದಿಲ್ಲ. ಉತ್ತರ ಪ್ರದೇಶದ ಬರೇಲಿಯ ಪ್ರದೀಪ ಸಕ್ಸೇನಾ ಎಂಬಾತ ತನ್ನ ಸಹೋದರನ ಕೊಲೆಗಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ 36 ವರ್ಷಗಳ ಹಿಂದೆ ಪೊಲೀಸ್ ಬಲೆಯಿಂದ ತಪ್ಪಿಸಿಕೊಂಡಿದ್ದ. ಪೊಲೀಸರಿಂದ ಪಾರಾಗಲು ತನ್ನ ಧರ್ಮ, ಹೆಸರು ಮತ್ತು ರೂಪವನ್ನು ಬದಲಾಯಿಸಿಕೊಂಡರೂ, 36 ವರ್ಷಗಳ ನಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
1987ರಲ್ಲಿ ಸಕ್ಸೇನಾ ತಮ್ಮ ಸಹೋದರನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮತ್ತು 1989 ರಲ್ಲಿ ಅಪರಾಧಿ ಎಂದು ಸಾಬೀತಾಗಿತ್ತು. ಆದರೆ, ಆತ ಪೆರೋಲ್ ಮೇಲೆ ಹೊರಬಂದಿದ್ದಾಗ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ.
ಅಲ್ಲಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಮೊರಾದಾಬಾದ್‌ಗೆ ಓಡಿಹೋದ ಹೋಗಿ ಅಲ್ಲಿ ಹೊಸ ವೇಷ ತೊಟ್ಟುಕೊಂಡ. ತನ್ನ ಹೆಸರನ್ನು ಅಬ್ದುಲ್ ರಹೀಮ್ ಎಂದು ಬದಲಾಯಿಸಿಕೊಂಡು ಗಡ್ಡ ಬೆಳೆಸಿಕೊಂಡು ಚಾಲಕನಾಗಿ ಕೆಲಸ ಮಾಡಲು ಪ್ರಾರಂಭಿಸಿದ. ದಶಕಗಳು ಕಳೆದಿದ್ದರಿಂದ, ಸಕ್ಸೇನಾ ಅಬ್ದುಲ್ ಆಗಿದ್ದರಿಂದ ತನ್ನ  ಹಿಂದಿನ ಜೀವನ ಮತ್ತು ಶಿಕ್ಷೆಯನ್ನು ಎಲ್ಲರೂ ಮರೆತಿದ್ದಾರೆಂದು ಭಾವಿಸಿದ್ದ.

ಆದರೆ ಕಾನೂನು ಬೇರೆ ಯೋಜನೆಗಳನ್ನೇ ಹೊಂದಿತ್ತು. ಅಕ್ಟೋಬರ್ 16 ರಂದು ಅಲಹಾಬಾದ್ ಹೈಕೋರ್ಟ್, ಪರೋಲ್‌ನಲ್ಲಿದ್ದಾಗ ನಾಪತ್ತೆಯಾಗಿದ್ದ ಅಪರಾಧಿ ಸಕ್ಸೇನಾನನ್ನು ನಾಲ್ಕು ವಾರಗಳಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ಆದೇಶ ನೀಡಿತು. ಇದರ ಬೆನ್ನಲ್ಲೇ ಪೊಲೀಸರು ಹಳೆಯ ಕಡತಗಳನ್ನು ಕೆದಕಿ, ನಾಪತ್ತೆಯಾದ ಅಪರಾಧಿಯನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಿದರು.
ಪೊಲೀಸರು ಬರೇಲಿಯಲ್ಲಿ ನೆಲೆಸಿರುವ ಸಕ್ಸೇನಾರ ಸಹೋದರ ಸುರೇಶ ಅವರನ್ನು ಸಂಪರ್ಕಿಸಿದರು. ಆಗ ಅವರಿಗೆ ಕೊಲೆ ಅಪರಾಧಿಯು ಪೊಲೀಸರಿಂದ ಪಾರಾಗಲು ತನ್ನ ಗುರುತನ್ನು ಬದಲಾಯಿಸಿಕೊಳ್ಳಲು ಧರ್ಮ ಹಾಗೂ ಹೆಸರು ಬದಲಾಯಿಸಿಕೊಂಡಿದ್ದು ತಿಳಿದುಬಂತು. ಮತ್ತಷ್ಟು ತನಿಖೆ ನಡೆಸಿದಾಗ, ಪೊಲೀಸರು ತನ್ನನ್ನು ಮರೆತಿದ್ದಾರೆ ಎಂದು ಅತಿಯಾದ ವಿಶ್ವಾಸದಲ್ಲಿದ್ದ ಸಕ್ಸೇನಾ ಯಾವುದೋ ಕೆಲಸಗಳಿಗಾಗಿ ಬರೇಲಿಗೆ ಬಂದಿದ್ದು ಪೊಲೀಸರಿಗೆ ಗೊತ್ತಾಯಿತು. ಅವರು ಆತನನ್ನು ಮರೆತಿರಲಿಲ್ಲ. ಯಾಕೆಂದರೆ ಪೊಲೀಸರು ಆತನನ್ನು ಹುಡುಕುತ್ತಿದ್ದರು. ತಕ್ಷಣವೇ ಅತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
“ಪ್ರಶ್ನಿಸುವಾಗ, ತಾನು ಪ್ರದೀಪಕುಮಾರ ಸಕ್ಸೇನಾ ಎಂದು ಮತ್ತು 1989 ರಲ್ಲಿ ಪೆರೋಲ್ ನಲ್ಲಿದ್ದಾಗ ತಪ್ಪಿಸಿಕೊಂಡಿರುವುದನ್ನು ಒಪ್ಪಿಕೊಂಡಿದ್ದಾನೆ. ನ್ಯಾಯಾಲಯದ ಕ್ರಮದಿಂದ ತಪ್ಪಿಸಿಕೊಳ್ಳಲು 2002 ರಲ್ಲಿ ಧರ್ಮ ಬದಲಾಯಿಸಿ ಮೊರಾದಾಬಾದ್‌ನಲ್ಲಿ ವಾಸಿಸುತ್ತಿದ್ದ. ನಿನ್ನೆ (ಗುರುವಾರ) ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ,” ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.

ಬರೇಲಿ ನಗರದ ಪೊಲೀಸ್ ಮುಖ್ಯಸ್ಥರಾದ ಮಾನುಷ ಪಾರಿಖ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, 1987 ರ ಪ್ರಕರಣದಲ್ಲಿ ಸಕ್ಸೇನಾ ಕೊಲೆ ಮತ್ತು ಕಳ್ಳತನದ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿದ್ದ. “ಪ್ರದೀಪ ಸಕ್ಸೇನಾ ಹೈಕೋರ್ಟ್‌ನಲ್ಲಿ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿ ನಂತರ ಪೆರೋಲ್ ಉಲ್ಲಂಘಿಸಿ ನಾಪತ್ತೆಯಾಗಿದ್ದ. ಈತನನ್ನು ಬಂಧಿಸುವಂತೆ ಹೈಕೋರ್ಟ್ ಆದೇಶ ನೀಡಿದ ನಂತರ ಆತನ ಬಗ್ಗೆ ತನಿಖೆ ನಡೆಸಿದಾಗ ಕಾನೂನಿನಿಂದ ತಪ್ಪಿಸಿಕೊಳ್ಳಲು ತಮ್ಮ ಗುರುತನ್ನು ಮರೆಮಾಚಿ ಧರ್ಮ ಬದಲಾಯಿಸಿಕೊಂಡಿರುವುದು ಕಂಡುಬಂತು ಎಂದು ಹೇಳಿದ್ದಾರೆ.
ಸಕ್ಸೇನಾ ಮೊರಾದಾಬಾದ್‌ನಲ್ಲಿ ಮುಸ್ಲಿಂ ಮಹಿಳೆಯನ್ನು ವಿವಾಹವಾಗಿ ಅಲ್ಲಿ ವಾಸಿಸುತ್ತಿದ್ದ ಎಂದು
ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. “ತಮ್ಮ ಸಹೋದರನ ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿದ್ದ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 36 ವರ್ಷಗಳ ನಂತರ ಈಗ ಈತನನ್ನು ಬಂಧಿಸಲಾಗಿದೆ,” ಎಂದು ಅವರು ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement