ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್ ಉಮೇಶ (umesh) ಇಂದು (ನ.30) ಬೆಳಿಗ್ಗೆ ನಿಧನರಾಗಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇತ್ತೀಚೆಗೆ ನಟ ಉಮೇಶ ಮನೆಯಲ್ಲೇ ಕಾಲು ಜಾರಿ ಬಿದ್ದು ಆಸ್ಪತ್ರೆಗೆ (Hospital) ದಾಖಲಾಗಿದ್ದರು. ಪರೀಕ್ಷೆ ವೇಳೆ ಅವರಿಗೆ 4ನೇ ಹಂತದ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಎಂ. ಎಸ್. ಉಮೇಶ ಅವರು ಮೈಸೂರಿನಲ್ಲಿ ಏಪ್ರಿಲ್ 22, 1945ರಲ್ಲಿ ಜನಿಸಿದರು. ರಂಗಭೂಮಿ ಮತ್ತು ಚಲನಚಿತ್ರ ನಟರಾಗಿ 1948ರಿಂದ ಸಕ್ರಿಯರಾಗಿದ್ದ ಅವರು 1960ರ ದಶಕದಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚಿನ ದಿನಗಳ ತನಕವೂ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದರು.
ಉಮೇಶ ಅವರ ಪೂರ್ಣ ಹೆಸರು ಮೈಸೂರು ಶ್ರೀಕಂಠಯ್ಯ ಉಮೇಶ. ಗುರು ಶಿಷ್ಯರು, ಹಾಲು ಜೇನು, ಅಪೂರ್ವ ಸಂಗಮ ಸೇರಿದಂತೆ ಕನ್ನಡದ ಬಹುತೇಕ ಸ್ಟಾರ್ ನಟರೊಂದಿಗೆ ಹಿಟ್ ಸಿನಿಮಾಗಳಲ್ಲಿ ಉಮೇಶ್ ನಟಿಸಿದ್ದಾರೆ. 350ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಉಮೇಶ್ ಅವರು ತಮ್ಮ ಹಾಸ್ಯದ ಹಾವಭಾವ ಹಾಗೂ ಡೈಲಾಗ್ನಿಂದ ಮನೆಮಾತಾಗಿದ್ದರು.
350 ಚಿತ್ರಗಳಲ್ಲಿ ನಟನೆ
4ನೇ ವರ್ಷದಿಂದ ಅವರು ನಾಟಕಗಳಲ್ಲಿ ಅಭಿನಯಿಸಿದ್ದರು. 1960ರಲ್ಲಿ ತೆರೆಕಂಡ ಕನ್ನಡದ ʼಮಕ್ಕಳ ರಾಜ್ಯʼ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ತಮ್ಮ ವಿಶಿಷ್ಟ ಹಾಸ್ಯ ಪಾತ್ರದ ಮೂಲಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತದ್ದ ಉಮೇಶ 60 ವರ್ಷಗಳಲ್ಲಿ ಸುಮಾರು 350 ಚಿತ್ರಗಳಲ್ಲಿ ನಟಿಸಿದ್ದಾರೆ. 1975ರಲ್ಲಿ ತೆರೆಕಂಡ ʼಕಥಾ ಸಂಗಮʼ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. ಉಮೇಶ ನಟಿಸಿದ ಕೊನೆಯ ಚಿತ್ರ 2023ರಲ್ಲಿ ರಿಲೀಸ್ ಆದ ʼಡೇರ್ ಡೆವಿಲ್ ಮುಸ್ತಫʼ.
ಅವರು ಹೆಸರಾಂತ ಚಿತ್ರಗಳಾದ ʼನಾಗರ ಹೊಳೆʼ (1978), ʼಗುರು ಶಿಷ್ಯರುʼ (1981), ʼಅನುಪಮಾʼ (1981), ʼಕಾಮನ ಬಿಲ್ಲುʼ (1983), ʼಅಪೂರ್ವ ಸಂಗಮʼ (1984), ʼಶ್ರುತಿ ಸೇರಿದಾಗʼ (1987), ʼಶ್ರಾವಣ ಬಂತುʼ (1984), ʼಮಲಯ ಮಾರುತʼ (1986), ʼಗೋಲ್ಮಾಲ್ ರಾಧಾಕೃಷ್ಣʼ (1990), ʼನೀನು ನಕ್ಕರೆ ಹಾಲು ಸಕ್ಕರೆʼ (1993), ʼವೆಂಕಟ್ ಇನ್ ಸಂಕಟʼ (2007) ಮೊದಲಾದ ಸಿನೆಮಾಗಳಲ್ಲಿ ನಟನೆ ಮಾಉವ ಮೂಲಕ ಮನೆ ಮಾತಾಗಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ