ಬೆಂಗಳೂರಿನ ಟ್ರಾಫಿಕ್ ನಿರ್ವಹಣೆ ‘ಅತ್ಯಂತ ಕಳಪೆ’…: ಎಸ್‌.ಪಿ. ಸಂಸದ ರಾಜೀವ ರೈ ಟೀಕೆ

ಬೆಂಗಳೂರು: ಸಮಾಜವಾದಿ ಪಕ್ಷದ (ಎಸ್ಪಿ) ಸಂಸದ ರಾಜೀವ ರೈ ಅವರು ಭಾನುವಾರ ಬೆಂಗಳೂರಿನ ಸಂಚಾರ ನಿರ್ವಹಣೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರದ ಸಂಚಾರ ನಿರ್ವಹಣೆಯು “ಅತ್ಯಂತ ಕಳಪೆ” ಯಾಗಿದೆ ಮತ್ತು ಟ್ರಾಫಿಕ್ ಪೊಲೀಸರು “ಬೇಜವಾಬ್ದಾರಿಯುತರು ಹಾಗೂ ನಿಷ್ಪ್ರಯೋಜಕರು” ಎಂದು ಕಟುವಾಗಿ ಟೀಕಿಸಿದ್ದಾರೆ.
ತಮ್ಮ X ಖಾತೆಯಲ್ಲಿ ಪೋಸ್ಟ್‌ ಮಾಡಿ ಅಸಮಾಧಾನ ಹೊರಹಾಕಿದ ಅವರು, ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ರಾಜಕುಮಾರ ಸಮಾಧಿ ರಸ್ತೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದಾಗಿ ತಿಳಿಸಿದ್ದಾರೆ.
ಅಧಿಕಾರಿಗಳ ಸಂಪರ್ಕಕ್ಕೆ ವಿಫಲ ಯತ್ನ
ಸಂಚಾರ ಅಧಿಕಾರಿಗಳನ್ನು ಸಂಪರ್ಕಿಸಲು ಹಲವಾರು ಬಾರಿ ಪ್ರಯತ್ನಿಸಿದರೂ ಯಾರೂ ಪ್ರತಿಕ್ರಿಯಿಸಲಿಲ್ಲ ಎಂದು ರಾಜೀವ ರೈ ಆರೋಪಿಸಿದ್ದಾರೆ. ತಮ್ಮ ಕರೆಯನ್ನು ಸ್ವೀಕರಿಸದ ಅಧಿಕಾರಿಗಳ ನಂಬರಿನ ಸ್ಕ್ರೀನ್‌ಶಾಟ್ ಅನ್ನು ಅವರು ಹಂಚಿಕೊಂಡಿದ್ದಾರೆ. ಸೋಮವಾರದಿಂದ ಆರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಹಾಜರಾಗಲು ದೆಹಲಿಗೆ ವಿಮಾನ ಹಿಡಿಯಲು ಹೋಗುತ್ತಿದ್ದಾಗ ತೀವ್ರ ಟ್ರಾಫಿಕ್‌ನಿಂದಾಗಿ ವಿಮಾನ ತಪ್ಪಿಸಿಕೊಳ್ಳುವ ಭೀತಿ ಎದುರಾಗಿತ್ತು ಎಂದೂ ಅವರು ಉಲ್ಲೇಖಿಸಿದ್ದಾರೆ.

‘ಈ ನಗರಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ’
ಈ ರೀತಿಯ ಕಳಪೆ ಸಂಚಾರ ನಿರ್ವಹಣೆಯು ನಗರದ ಪ್ರತಿಷ್ಠೆಗೆ ಧಕ್ಕೆಯುಂಟು ಮಾಡುತ್ತದೆ ಎಂದು ಸಂಸದರು ಹೇಳಿದ್ದಾರೆ. ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ, ಪೊಲೀಸ್ ಆಯುಕ್ತರು ಮತ್ತು ಸಂಚಾರ ವಿಭಾಗದ ಜಂಟಿ ಆಯುಕ್ತರನ್ನು ಟ್ಯಾಗ್ ಮಾಡಿ ಒತ್ತಾಯಿಸಿದ್ದಾರೆ.
“ಮಾನ್ಯ ಮುಖ್ಯಮಂತ್ರಿಗಳೇ ಕ್ಷಮಿಸಿ, ಆದರೆ ನಿಮ್ಮಲ್ಲಿರುವ ಸಂಚಾರ ನಿರ್ವಹಣೆ ಅತ್ಯಂತ ಕಳಪೆಯಾಗಿದೆ, ಮತ್ತು ಸಂಚಾರ ಪೊಲೀಸರು ಅತ್ಯಂತ ಬೇಜವಾಬ್ದಾರಿಯುತರು, ನಿಷ್ಪ್ರಯೋಜಕರು. ಅವರು ಕರೆಗಳನ್ನೂ ಸ್ವೀಕರಿಸುವುದಿಲ್ಲ. ಅವರನ್ನು ಸಂಪರ್ಕಿಸಲು ನಾನು ಮಾಡಿದ ಪ್ರಯತ್ನದ ಎಸ್ಎಸ್ [screenshot] ಇಲ್ಲಿದೆ. ನನ್ನ ಕರೆಯನ್ನು ಯಾರೂ ಸ್ವೀಕರಿಸಿಲ್ಲ. ಕಳೆದ ಒಂದು ಗಂಟೆಯಿಂದ ನಾವು ರಾಜಕುಮಾಜ ಸಮಾಧಿ ರಸ್ತೆಯಲ್ಲಿ ಒಂದೇ ಸ್ಥಳದಲ್ಲಿ ಸಿಲುಕಿಕೊಂಡಿದ್ದೇವೆ, ವಿಮಾನ ತಪ್ಪಿಹೋಗಲಿದೆ, ನಾಳೆ ನಾನು ಸಂಸತ್ತಿನ ಅಧಿವೇಶನಕ್ಕೆ ಹಾಜರಾಗಬೇಕಿದೆ,” ಎಂದು ರೈ ಹೇಳಿದ್ದಾರೆ.

“ಈ ಅಸಮರ್ಥ ಅಧಿಕಾರಿಗಳು ಈ ಸುಂದರ ನಗರದ ಹೆಸರು ಮತ್ತು ಕೀರ್ತಿಯನ್ನು ಹಾಳು ಮಾಡಲು ಸಾಕು. ಬೆಂಗಳೂರಿನ ಟ್ರಾಫಿಕ್ ಈಗ ಅತ್ಯಂತ ಕುಖ್ಯಾತ ಟ್ರಾಫಿಕ್ ಎಂಬ ಹೆಸರು ಗಳಿಸಿರುವುದರಲ್ಲಿ ಯಾವುದೇ ಅನುಮಾನವಿಲ್ಲ,” ಎಂದು ಎಸ್ಪಿ ಸಂಸದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ದೆಹಲಿಯಲ್ಲಿ ಭೇಟಿಯಾಗಿ ಟ್ರಾಫಿಕ್ ತೋರಿಸುತ್ತೇನೆ’
ರಾಜೀವ್ ರೈ ಅವರ ಈ ಪೋಸ್ಟ್‌ಗೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಪ್ರತಿಕ್ರಿಯಿಸಿದ್ದಾರೆ. ದೆಹಲಿಯಲ್ಲಿ ಸಂಸದರನ್ನು ಭೇಟಿ ಮಾಡಿ ಅಲ್ಲಿನ ಟ್ರಾಫಿಕ್ ಹೇಗಿದೆ ಎಂದು ತೋರಿಸುತ್ತೇನೆ ಎಂದು ಹೇಳಿದ್ದಾರೆ. “ನಾನು ಅವರನ್ನು ದೆಹಲಿಯಲ್ಲಿ ಭೇಟಿಯಾಗುತ್ತೇನೆ… ದೆಹಲಿಯಲ್ಲಿ ಅವರನ್ನು ಭೇಟಿಯಾಗಿ, ದೆಹಲಿಯ ಟ್ರಾಫಿಕ್ ಹೇಗಿದೆ ಎಂದು ತೋರಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.
ತಂತ್ರಜ್ಞಾನ ಉದ್ಯಮಕ್ಕೆ ಹೆಸರುವಾಸಿಯಾಗಿರುವ ಬೆಂಗಳೂರು, ದೀರ್ಘಕಾಲದಿಂದ ಸಂಚಾರ ದಟ್ಟಣೆಯ ಸಮಸ್ಯೆ ವಿರುದ್ಧ ಹೋರಾಡುತ್ತಿದೆ. ರೈ ಅವರ ಈ ಟೀಕೆಗಳು ನಗರದ ಪ್ರಯಾಣಿಕರು ಪ್ರತಿದಿನ ಎದುರಿಸುತ್ತಿರುವ ಸವಾಲುಗಳತ್ತ ಮತ್ತೊಮ್ಮೆ ಗಮನ ಸೆಳೆದಿವೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement