ವೀಡಿಯೊ | ಗಂಟೆಗೆ 800 ಕಿಮೀ ವೇಗದಲ್ಲಿ ಯುದ್ಧ ವಿಮಾನದ ಪಾರಾಗುವ ಸಿಸ್ಟಂನ ರಾಕೆಟ್-ಸ್ಲೆಡ್ ಟೆಸ್ಟ್‌ ಯಶಸ್ವಿ

 ಚಂಡೀಗಢ: ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO)ಯು ಯುದ್ಧ ವಿಮಾನದ ಪಾರುಗಾಣಿಕಾ ವ್ಯವಸ್ಥೆಯ ಮಹತ್ವದ ಹೈ-ಸ್ಪೀಡ್ ರಾಕೆಟ್-ಸ್ಲೆಡ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಚಂಡೀಗಢದಲ್ಲಿರುವ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿ (TBRL)ಯ ರೈಲ್ ಟ್ರ್ಯಾಕ್ ರಾಕೆಟ್ ಸ್ಲೆಡ್ (RTRS) ಸೌಲಭ್ಯದಲ್ಲಿ ಈ ಪರೀಕ್ಷೆಯನ್ನು ಗಂಟೆಗೆ 800 ಕಿಲೋಮೀಟರ್ ನಿಖರ ನಿಯಂತ್ರಿತ ವೇಗದಲ್ಲಿ ನಡೆಸಲಾಗಿದೆ.
ಈ ಪರೀಕ್ಷೆಯ ಮೂಲಕ, ವೈಮಾನಿಕ ಸಿಬ್ಬಂದಿಯ ಸಂಪೂರ್ಣ ಸುರಕ್ಷಿತ ಮರಳುವಿಕೆ ಸೇರಿದಂತೆ ಪ್ರಮುಖ ಸುರಕ್ಷತಾ ಮಾನದಂಡಗಳನ್ನು ದೃಢೀಕರಿಸಲಾಗಿದೆ. ಪರೀಕ್ಷೆಯನ್ನು ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ADA) ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಹಯೋಗದೊಂದಿಗೆ ನಡೆಸಲಾಯಿತು.
ಅತ್ಯಾಧುನಿಕ ಸಾಮರ್ಥ್ಯ ಹೊಂದಿರುವ ರಾಷ್ಟ್ರಗಳ ಸಾಲಿಗೆ ಭಾರತ 
ರಕ್ಷಣಾ ಸಚಿವಾಲಯದ ಪ್ರಕಾರ, ಈ ಯಶಸ್ವಿ ಪರೀಕ್ಷೆಯು ಭಾರತವನ್ನು ಅತ್ಯಾಧುನಿಕ, ಆಂತರಿಕ (in-house) ಪಾರುಗಾಣಿಕಾ ವ್ಯವಸ್ಥೆ ಪರೀಕ್ಷಾ ಸಾಮರ್ಥ್ಯವನ್ನು ಹೊಂದಿರುವ “ಉನ್ನತ ರಾಷ್ಟ್ರಗಳ ಕ್ಲಬ್”ಗೆ ಸೇರಿಸಿದೆ.
ರಕ್ಷಣಾ ಸಚಿವಾಲಯವು ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, “ಶೂನ್ಯ-ಶೂನ್ಯ ಪರೀಕ್ಷೆ (zero-zero test)ನಂತಹ ಸ್ಥಿರ ಪರೀಕ್ಷೆಗಳಿಗಿಂತ ಡೈನಾಮಿಕ್ ಎಜೆಕ್ಷನ್ ಪರೀಕ್ಷೆಗಳು ಗಮನಾರ್ಹವಾಗಿ ಹೆಚ್ಚು ಸಂಕೀರ್ಣವಾಗಿವೆ. ಇವು ಎಜೆಕ್ಷನ್ ಸೀಟ್‌ನ ಕಾರ್ಯಕ್ಷಮತೆ ಮತ್ತು ಕ್ಯಾನೋಪಿ ಸೆವೆರೆನ್ಸ್ (canopy severance) ಸಿಸ್ಟಮ್‌ನ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡುವ ನಿಜವಾದ ಮಾಪಕವಾಗಿದೆ.
ಲಘು ಯುದ್ಧ ವಿಮಾನ (LCA)ದ ಮುಂಭಾಗವನ್ನು ಒಳಗೊಂಡ ಡ್ಯುಯಲ್-ಸ್ಲೆಡ್ ವ್ಯವಸ್ಥೆಯನ್ನು ಅನೇಕ ಘನ ಪ್ರೊಪೆಲ್ಲಂಟ್ ರಾಕೆಟ್ ಮೋಟರ್‌ಗಳ ಹಂತ-ಹಂತದ ಉಡಾವಣೆಯ ಮೂಲಕ ನಿಖರವಾಗಿ ನಿಯಂತ್ರಿತ ವೇಗಕ್ಕೆ ತಳ್ಳಲಾಯಿತು.
ಕ್ಯಾನೋಪಿ ಚೂರುಚೂರುಗೊಳಿಸುವಿಕೆಯ ಮಾದರಿ, ಎಜೆಕ್ಷನ್ ಸೀಕ್ವೆನ್ಸಿಂಗ್ ಮತ್ತು ವೈಮಾನಿಕ ಸಿಬ್ಬಂದಿಯ ಸುರಕ್ಷಿತ ಮರಳುವಿಕೆ ಪ್ರಕ್ರಿಯೆಯನ್ನು ಯಂತ್ರೋಪಕರಣಗಳನ್ನು ಅಳವಡಿಸಿದ ಮಾನವಶಾಸ್ತ್ರೀಯ ಟೆಸ್ಟ್‌ ಡಮ್ಮಿ (Anthropomorphic Test Dummy) ಬಳಸಿ ಅನುಕರಿಸಲಾಯಿತು. ಹೊರಹಾಕಲ್ಪಟ್ಟ ಪೈಲಟ್‌ಗಳು ಅನುಭವಿಸಬಹುದಾದ ನಿರ್ಣಾಯಕ  ಮೊಮೆಂಟ್‌ಗಳು ಮತ್ತು ವೇಗವರ್ಧನೆಗಳನ್ನು ಈ ಡಮ್ಮಿ ದಾಖಲಿಸಿದೆ. ಸಂಪೂರ್ಣ ಪ್ರಕ್ರಿಯೆಯನ್ನು ವಿಮಾನದ ಆಂತರಿಕ ಮತ್ತು ನೆಲದ ಮೇಲಿನ ಇಮೇಜಿಂಗ್ ವ್ಯವಸ್ಥೆಗಳ ಮೂಲಕ ಸೆರೆಹಿಡಿಯಲಾಗಿದೆ.
ರಕ್ಷಣಾ ಸಚಿವರ ಅಭಿನಂದನೆ: ಆತ್ಮನಿರ್ಭರತೆಯತ್ತ ಮಹತ್ವದ ಹೆಜ್ಜೆ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಯಶಸ್ವಿ ಪರೀಕ್ಷೆಗಾಗಿ ಡಿಆರ್‌ಡಿಒ (DRDO), ಭಾರತೀಯ ವಾಯುಪಡೆ (IAF), ವೈಮಾನಿಕ ಅಭಿವೃದ್ಧಿ ಸಂಸ್ಥೆ((ADA) ಮತ್ತು ಎಚ್‌ಎಎಲ್‌ (HAL)ಗೆ ಅಭಿನಂದನೆ ಸಲ್ಲಿಸಿದ್ದಾರೆ. ಭಾರತದ ಸ್ಥಳೀಯ ರಕ್ಷಣಾ ಸಾಮರ್ಥ್ಯವು ಆತ್ಮನಿರ್ಭರತೆಯ ಕಡೆಗೆ ಇಟ್ಟಿರುವ ಮಹತ್ವದ ಮೈಲಿಗಲ್ಲು ಇದಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ರಕ್ಷಣಾ ಸಚಿವರ ಕಚೇರಿಯು ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿದ್ದು, “ಡಿಆರ್‌ಡಿ, ಚಂಡೀಗಢದ ಟಿಬಿಆರ್‌ಎಲ್‌ (TBRL)ನ ಆರ್‌ಟಿಆರ್‌ಎಸ್‌ (RTRS) ಸೌಲಭ್ಯದಲ್ಲಿ 800 km/h ನ ನಿಖರ ನಿಯಂತ್ರಿತ ವೇಗದಲ್ಲಿ ಫೈಟರ್ ವಿಮಾನದ ಪಾರುಗಾಣಿಕಾ ವ್ಯವಸ್ಥೆಯ ಹೈ-ಸ್ಪೀಡ್ ರಾಕೆಟ್-ಸ್ಲೆಡ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಇದು ಕ್ಯಾನೋಪಿ ಸೆವೆರೆನ್ಸ್ (canopy severance), ಎಜೆಕ್ಷನ್ ಸಿಕ್ವೆನ್ಸಿಂಗ್‌ ಮತ್ತು ಸಿಬ್ಬಂದಿ ಮರಳಿ ಬರುವುದನ್ನು ದೃಢೀಕರಿಸಿದೆ  ಎಂದು ತಿಳಿಸಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗೂ ಡಿಆರ್‌ಡಿಒ ಅಧ್ಯಕ್ಷರಾದ ಸಮೀರ ವಿ ಕಾಮತ್ ಅವರು ಸಹ ಈ ಯಶಸ್ವಿ ಪ್ರದರ್ಶನದಲ್ಲಿ ಭಾಗಿಯಾದ ಡಿಆರ್‌ಡಿಒ ತಂಡವನ್ನು ಅಭಿನಂದಿಸಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement