ಗುರುವಾರ 550ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದ ಇಂಡಿಗೋ

ನವದೆಹಲಿ : ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ (IndiGo) ಗುರುವಾರ 550ಕ್ಕೂ ಹೆಚ್ಚು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದ್ದು, ಹಲವಾರು ವಿಮಾನ ನಿಲ್ದಾಣಗಳಲ್ಲಿ ಸೇವೆಗಳು ವಿಳಂಬವಾಗಿವೆ.
ಸತತ ಮೂರನೇ ದಿನವೂ ವಿಮಾನ ಕಾರ್ಯಾಚರಣೆಯ ಅಡಚಣೆಗಳು ಮುಂದುವರಿದಿದ್ದು, ನೂರಾರು ಪ್ರಯಾಣಿಕರ ಮೇಲೆ ತೀವ್ರ ಪರಿಣಾಮ ಬೀರಿದೆ.
ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ವಿಮಾನಯಾನ ನಿಯಂತ್ರಣ ಸಂಸ್ಥೆ ಡಿಜಿಸಿಎ (DGCA) ಇಂಡಿಗೋದ ಹಿರಿಯ ಅಧಿಕಾರಿಗಳೊಂದಿಗೆ ಪರಿಸ್ಥಿತಿಯ ಕುರಿತು ಮತ್ತು ಪರಿಸ್ಥಿತಿ ನಿಭಾಯಿಸುವ ಯೋಜನೆಗಳ ಬಗ್ಗೆ ಸಭೆ ನಡೆಸಿದ ದಿನವೇ, ವಿಮಾನಯಾನ ಸಂಸ್ಥೆಯ ಸಿಇಒ ಪೀಟರ್ ಎಲ್ಬರ್ಸ್ (Pieter Elbers) ಅವರು ಸಿಬ್ಬಂದಿಗೆ, “ಕಾರ್ಯಾಚರಣೆಯನ್ನು ಸಹಜ ಸ್ಥಿತಿಗೆ ತರುವುದು ಮತ್ತು ಸಮಯಪಾಲನೆಯನ್ನು ಮರಳಿ ತರುವುದು ‘ಸುಲಭದ ಗುರಿ’ಯಾಗಿರುವುದಿಲ್ಲ” ಎಂದು ಹೇಳಿದ್ದಾರೆ.

ದಿನಕ್ಕೆ ಸುಮಾರು 2,300 ವಿಮಾನಗಳನ್ನು ನಿರ್ವಹಿಸುವ ಮತ್ತು ಸಮಯಪಾಲನೆಯನ್ನು ತನ್ನ ಹೆಗ್ಗುರುತಾಗಿ ಪ್ರಸ್ತುತಪಡಿಸುವ ಈ ವಿಮಾನಯಾನ ಸಂಸ್ಥೆಯು, ಬುಧವಾರ ಕೇವಲ ಶೇ. 19.7 ರಷ್ಟು ವಿಮಾನಗಳನ್ನು ಮಾತ್ರ ಸಮಯಕ್ಕೆ ಸರಿಯಾಗಿ ಹಾರಾಟ ಮಾಡಿದೆ. ಇದು ಮಂಗಳವಾರದ ಶೇ.35 ರಿಂದ ತೀವ್ರ ಕುಸಿತ ಕಂಡಿದೆ.
ಸಿಬ್ಬಂದಿಯ ಕೊರತೆ ಮತ್ತು ತಾಂತ್ರಿಕ ಸಮಸ್ಯೆಗಳು ಸೇರಿದಂತೆ ಹಲವಾರು ಕಾರಣಗಳಿಂದಾಗಿ ವಿಮಾನಗಳ ಹಾರಾಟದಲ್ಲಿ ಗಣನೀಯ ತೊಂದೆರಗಳನ್ನು ಎದುರಿಸುತ್ತಿರುವ ಇಂಡಿಗೋ, ತನ್ನ ವೇಳಾಪಟ್ಟಿಗಳನ್ನು ಬದಲಾಯಿಸಿದೆ. ಇದರರ್ಥ ಕಾರ್ಯಾಚರಣೆಗಳನ್ನು ಸಹಜ ಸ್ಥಿತಿಗೆ ತರುವ ಭಾಗವಾಗಿ, ಮೊದಲೇ ಯೋಜಿಸಲಾದ ಸೇವೆಗಳ ರದ್ದತಿಗಳನ್ನು ನಡೆಸಲಾಗುತ್ತಿದೆ.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

ವರದಿಗಳ ಪ್ರಕಾರ, ಗುರುವಾರ ದೆಹಲಿ ವಿಮಾನ ನಿಲ್ದಾಣದಲ್ಲಿ 172 ವಿಮಾನಗಳು ಸೇರಿದಂತೆ, ವಿವಿಧ ವಿಮಾನ ನಿಲ್ದಾಣಗಳಲ್ಲಿ 550ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಕನಿಷ್ಠ 118 ವಿಮಾನಗಳು, ಬೆಂಗಳೂರಿನಲ್ಲಿ 100 ವಿಮಾನಗಳು, ಹೈದರಾಬಾದ್‌ನಲ್ಲಿ 75 ವಿಮಾನಗಳು,
ಕೋಲ್ಕತ್ತಾದಲ್ಲಿ 35 ವಿಮಾನಗಳು,ಚೆನ್ನೈನಲ್ಲಿ 26 ವಿಮಾನಗಳು ಹಾಗೂ ಗೋವಾದಲ್ಲಿ 11 ವಿಮಾನಗಳು ರದ್ದುಗೊಂಡಿವೆ ಎಂದು ಹೇಳಲಾಗಿದೆ. ಇದಲ್ಲದೆ, ಇತರ ವಿಮಾನ ನಿಲ್ದಾಣಗಳಲ್ಲಿಯೂ ವಿಮಾನಗಳ ರದ್ದತಿ ವರದಿಯಾಗಿದೆ.
“ಇಂಡಿಗೋದಲ್ಲಿ ವಿಮಾನಗಳ ರದ್ದತಿ ತೀವ್ರವಾಗಿ ಹೆಚ್ಚಾಗಿದ್ದು, ದಿನಕ್ಕೆ ಸುಮಾರು 170-200 ವಿಮಾನಗಳವರೆಗೆ ತಲುಪಿದೆ, ಇದು ಸಾಮಾನ್ಯವಾಗಿ ಆಗುವ ರದ್ದತಿಗಿಂತ ಗಣನೀಯವಾಗಿ ಹೆಚ್ಚಾಗಿದೆ” ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಹೇಳಿಕೆಯಲ್ಲಿ ತಿಳಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement