ವಿವಾದಾತ್ಮಕ ಹೇಳಿಕೆ ; ತೃಣಮೂಲ ಕಾಂಗ್ರೆಸ್‌ ಶಾಸಕನ ಅಮಾನತು ಮಾಡಿದ ಮಮತಾ ಬ್ಯಾನರ್ಜಿ

ಮುರ್ಷಿದಾಬಾದ್‌ನಲ್ಲಿ ಬಾಬರಿ ಮಸೀದಿಯ ಮಾದರಿಯಲ್ಲಿ ಮಸೀದಿಯನ್ನು ನಿರ್ಮಿಸುವ ಬಗ್ಗೆ ಹೇಳಿಕೆ ನೀಡುವ ಮೂಲಕ ದೊಡ್ಡ ವಿವಾದವನ್ನು ಹುಟ್ಟುಹಾಕಿದ ನಂತರ ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯೂನ್ ಕಬೀರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಈ ಹಿಂದೆಯೂ ಅವರ ಹೇಳಿಕೆಗಳ ಕುರಿತು ಅವರಿಗೆ ಎಚ್ಚರಿಕೆ ನೀಡಲಾಗಿತ್ತು ಎಂದು ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ತಿಳಿಸಿದ್ದಾರೆ. ಡಿಸೆಂಬರ್ 6 ರಂದು ಬೆಲ್ದಂಗಾದಲ್ಲಿ ಬಾಬರಿ ಮಸೀದಿಗೆ ಶಿಲಾನ್ಯಾಸ ಮಾಡುವ ಯೋಜನೆಯನ್ನು ಕಬೀರ್ ಬಹಿರಂಗಪಡಿಸಿದ್ದರು.
“ನಮ್ಮ ಪಕ್ಷದ ಮುರ್ಷಿದಾಬಾದ್‌ನ ಶಾಸಕರೊಬ್ಬರು ಇದ್ದಕ್ಕಿದ್ದಂತೆ ಬಾಬ್ರಿ ಮಸೀದಿ ನಿರ್ಮಿಸುವುದಾಗಿ ಘೋಷಿಸಿದರು. ಯಾಕೆ ಇದ್ದಕ್ಕಿದ್ದಂತೆ ಬಾಬ್ರಿ ಮಸೀದಿ? ನಾವು ಅವರಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದೆವು. ನಾವು ಜಾತ್ಯತೀತ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದೇವೆ. ನಮ್ಮ ಪಕ್ಷದ ನಿರ್ಧಾರದ ಪ್ರಕಾರ, ನಾವು ಶಾಸಕ ಹುಮಾಯೂನ್ ಕಬೀರ್ ಅವರನ್ನು ಅಮಾನತುಗೊಳಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
“ವಿಭಜಕ ರಾಜಕೀಯವನ್ನು ಉತ್ತೇಜಿಸುವುದು ಬಿಜೆಪಿಯ ನೀತಿ” ಎಂದು ಆರೋಪಿಸಿದ ಕೋಲ್ಕತ್ತಾ ಮೇಯರ್, “ಯಾಕೆ ಡಿಸೆಂಬರ್ 6? ಕಬೀರ್ ಅವರು ಬೇರೆ ಹೆಸರನ್ನು ಏಕೆ ಆರಿಸಲಿಲ್ಲ? ಅವರು ಮುರ್ಷಿದಾಬಾದ್‌ನಲ್ಲಿ ಶಾಲೆ ಅಥವಾ ಕಾಲೇಜು ನಿರ್ಮಿಸಬಹುದು. ಧಾರ್ಮಿಕ ವಿಷಯಗಳ ಮೂಲಕ ಬಂಗಾಳವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಬಿಜೆಪಿಯ ನೀತಿಯಿದು ಎಂದು ನಾವು ಭಾವಿಸುತ್ತೇವೆ. ಬಿಜೆಪಿ ವಿಭಜಕ ರಾಜಕೀಯದಲ್ಲಿ ನಂಬಿಕೆ ಇಟ್ಟಿದೆ. ಬಿಜೆಪಿ ಚುನಾವಣೆಗೆ ಮೊದಲು ಈ ರೀತಿಯ ಕಾರ್ಡ್ ಆಡಿದೆ. ಕಬೀರ್ ಅವರು ಈ ವಿಭಜಕ ರಾಜಕೀಯದಲ್ಲಿ ಸಿಲುಕಿದ್ದಾರೆಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.
ತಮ್ಮ ಅಮಾನತು ಮಾಡಿದ ನಂತರ ಈ ಬಗ್ಗೆ ಪ್ರತಿಕ್ರಿಯಿಸಿರುವ ಕಬೀರ್‌, ಡಿಸೆಂಬರ್ 22 ರಂದು ತಮ್ಮದೇ ಆದ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ. “ನಾನು ಮಮತಾ ಬ್ಯಾನರ್ಜಿ ಬೆಂಬಲಿಸಿ ಪಕ್ಷದಲ್ಲಿದ್ದೇನೆ. ಅವರು ನನ್ನನ್ನು ಪಕ್ಷ ಬಿಡಲು ಸೂಚಿಸಿದರೆ, ನಾನು ಪಕ್ಷ ಬಿಡುತ್ತೇನೆ. ಮಾಧ್ಯಮಗಳಿಂದ ಅಮಾನತುಗೊಂಡ ಬಗ್ಗೆ ನನಗೆ ತಿಳಿದುಬಂದಿತು. ನಾನು ನಾಳೆ ಟಿಎಂಸಿಗೆ ರಾಜೀನಾಮೆ ನೀಡುತ್ತೇನೆ” ಎಂದು ಅವರು ಹೇಳಿದರು, “ಮುರ್ಷಿದಾಬಾದ್ ಜನರು ಇದಕ್ಕೆ ಉತ್ತರ ನೀಡುತ್ತಾರೆ. ನಾನು ಬಿಜೆಪಿ ಮತ್ತು ಟಿಎಂಸಿ ವಿರುದ್ಧ ಹೋರಾಡುತ್ತೇನೆ” ಎಂದು ಹೇಳಿದ್ದಾರೆ.
ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ತಿಂಗಳುಗಳ ಮೊದಲು ಈ ಬೆಳವಣಿಗೆಗಳು ನಡೆದಿವೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement