ಕಾರವಾರ | ಮಾದಕ ವಸ್ತುಗಳನ್ನು ನಿರ್ಬಂಧಿಸಿದ್ದಕ್ಕೆ ಕೈದಿಗಳಿಂದ ಜೈಲು ಸಿಬ್ಬಂದಿ ಮೇಲೆ ಹಲ್ಲೆ

ಕಾರವಾರ: ಜಿಲ್ಲಾ ಕಾರಾಗೃಹದಲ್ಲಿ ಮಾದಕ ವಸ್ತುಗಳ ಪೂರೈಕೆಗೆ ಅವಕಾಶ ನೀಡದೆ ಕಠಿಣ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ, ಜೈಲರ್ ಹಾಗೂ ಮೂವರು ಸಿಬ್ಬಂದಿ ಮೇಲೆ ವಿಚಾರಣಾಧೀನ ಕೈದಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಗಂಭೀರ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ಮಂಗಳೂರು ಮೂಲದ ಕುಖ್ಯಾತ ರೌಡಿಗಳಾದ ಮೊಹ್ಮದ್ ಅಬ್ದುಲ್ ಫಯಾನ್ ಹಾಗೂ ಕೌಶಿಕ ನಿಹಾಲ್ ಎಂಬವರು ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.

ಡಕಾಯತಿ ಸೇರಿದಂತೆ 12ಕ್ಕೂ ಹೆಚ್ಚು ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಇವರನ್ನು, ಮಂಗಳೂರು ಜೈಲಿನಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾದ ಕಾರಣ ಕಾರವಾರ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಕಾರವಾರ ಜೈಲಿನಲ್ಲಿಯೂ ತಮ್ಮ ಹಿಂದಿನ ಚಾಳಿ ಮುಂದುವರಿಸಲು ಯತ್ನಿಸಿದ ಆರೋಪಿಗಳಿಗೆ ಜೈಲರ್ ಕಲ್ಲಪ್ಪ ಗಸ್ತಿ ಕಠಿಣ ಕ್ರಮ ಕೈಗೊಂಡಿದ್ದು ತೊಂದರೆಯಾಗಿತ್ತು ಎನ್ನಲಾಗಿದೆ.
ಕಳೆದ ಕೆಲ ದಿನಗಳಿಂದ ಜೈಲಿನಲ್ಲಿ ಮಾದಕ ಪದಾರ್ಥಗಳ ನಿಯಂತ್ರಣಕ್ಕೆ ಜೈಲರ್ ಕಲ್ಲಪ್ಪ ತಪಾಸಣೆಯನ್ನು ಬಿಗಿಗೊಳಿಸಿದ್ದರು. ಕೈದಿಗಳು ಮತ್ತು ಸಂದರ್ಶಕರ ಮೇಲೆ ಅನಿರೀಕ್ಷಿತ ತಪಾಸಣೆ ಹೆಚ್ಚಿಸಲಾಗಿದೆ. ಎಲ್ಲಾ ಒಳಬರುವ ಪಾರ್ಸೆಲ್‌ಗಳು ಮತ್ತು ಆಹಾರ ಪದಾರ್ಥಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ. ಮೊಬೈಲ್ ಫೋನ್‌ಗಳು ಮತ್ತು ನಿಷಿದ್ಧ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.ಮಾದಕವಸ್ತುಗಳನ್ನು ಹೊಂದಿರುವ ಕೈದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಇದೇ ವಿಚಾರವಾಗಿ ಆರೋಪಿಗಳು ಜೈಲರ್ ಜೊತೆ ವಾಗ್ವಾದ ನಡೆಸಿದ್ದಾರೆ. ನಂತರ ಕೈದಿಗಳು, ಜೈಲರ್ ಕಲ್ಲಪ್ಪ ಗಸ್ತಿ ಹಾಗೂ ಕರ್ತವ್ಯನಿರತ ಇತರ ಮೂವರು ಸಿಬ್ಬಂದಿಗಳ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಜೈಲರ್ ಹಾಗೂ ಮೂವರು ಸಿಬ್ಬಂದಿಗಳನ್ನು ಚಿಕಿತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೈಲಿನ ಶಿಸ್ತು ಕಾಪಾಡಲು ಹೋದ ಅಧಿಕಾರಿಗಳ ಮೇಲೆಯೇ ನಡೆದ ಈ ಹಲ್ಲೆ ಪ್ರಕರಣವು ಕಾರಾಗೃಹದ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement