ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ, ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನಾ ಅವರು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಜೊತೆಗಿನ ತಮ್ಮ ವಿವಾಹವನ್ನು ರದ್ದುಗೊಳಿಸಿರುವುದಾಗಿ ಭಾನುವಾರ ಪ್ರಕಟಿಸಿದ್ದಾರೆ.
ಕಳೆದ ಕೆಲವು ವಾರಗಳಿಂದ ಸಾರ್ವಜನಿಕವಾಗಿ ಗಮನ ಸೆಳೆದಿದ್ದ ಮದುವೆ ಸುದ್ದಿಗೆ ಹಠಾತ್ ಅಂತ್ಯ ಹಾಡಿತು. ಈ ಸಂದರ್ಭದಲ್ಲಿ ಕುಟುಂಬದ ಗೌಪ್ಯತೆ ಕಾಪಾಡಲು ಅವಕಾಶ ಕೋರಿದ್ದಾರೆ ಮತ್ತು ಶಾಂತಿಯುತವಾಗಿ ಮುಂದುವರೆಯಲು ಬಯಸುವುದಾಗಿ ಭಾರತದ ಉಪನಾಯಕಿ ಸಾರ್ವಜನಿಕ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಮಂಧಾನಾ ಹೇಳಿದ್ದೇನು?:
“ಕಳೆದ ಕೆಲವು ವಾರಗಳಿಂದ ನನ್ನ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಈ ಸಮಯದಲ್ಲಿ ಮಾತನಾಡುವುದು ಮುಖ್ಯವೆಂದು ನನಗೆ ಅನಿಸಿದೆ. ನಾನು ತುಂಬ ಖಾಸಗಿ ವ್ಯಕ್ತಿ ಮತ್ತು ಅದನ್ನು ಹಾಗೆಯೇ ಇರಿಸಲು ಬಯಸುತ್ತೇನೆ. ಆದರೆ ವಿವಾಹವು ರದ್ದುಗೊಂಡಿದೆ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಈ ವಿಷಯವನ್ನು ನಾನು ಇಲ್ಲಿಗೆ ಮುಗಿಸಲು ಇಷ್ಟಪಡುತ್ತೇನೆ ಮತ್ತು ನೀವೆಲ್ಲರೂ ಇದೇ ರೀತಿ ಮಾಡುವಂತೆ ವಿನಂತಿಸುತ್ತೇನೆ. ದಯವಿಟ್ಟು ಈ ಸಮಯದಲ್ಲಿ ಎರಡೂ ಕುಟುಂಬಗಳ ಗೌಪ್ಯತೆಯನ್ನು ಗೌರವಿಸಿ ಮತ್ತು ನಾವು ನಮ್ಮದೇ ವೇಗದಲ್ಲಿ ಈ ಪರಿಸ್ಥಿತಿಯನ್ನು ನಿಭಾಯಿಸಿ ಮುಂದೆ ಸಾಗಲು ಅವಕಾಶ ಮಾಡಿಕೊಡಿ” ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಮಂಧಾನಾ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ತಮ್ಮ ಸಮರ್ಪಣೆಯನ್ನು ದೃಢಪಡಿಸಿದ್ದು, ತಮ್ಮ ಗಮನವು ಅಚಲವಾಗಿದೆ ಎಂದು ಒತ್ತಿ ಹೇಳಿದ್ದಾರೆ.
“ನಮ್ಮನ್ನು ನಡೆಸುವ ಒಂದು ಉನ್ನತ ಉದ್ದೇಶವಿದೆ ಎಂದು ನಾನು ನಂಬುತ್ತೇನೆ ಮತ್ತು ನನ್ನ ಪಾಲಿಗೆ ಅದು ಯಾವಾಗಲೂ ದೇಶವನ್ನು ಅತ್ಯುನ್ನತ ಮಟ್ಟದಲ್ಲಿ ಪ್ರತಿನಿಧಿಸುವುದಾಗಿದೆ. ನಾನು ಸಾಧ್ಯವಾದಷ್ಟು ಕಾಲ ಭಾರತಕ್ಕಾಗಿ ಆಟವಾಡುವುದನ್ನು ಮತ್ತು ಟ್ರೋಫಿಗಳನ್ನು ಗೆಲ್ಲುವುದನ್ನು ಮುಂದುವರಿಸಲು ಆಶಿಸುತ್ತೇನೆ. ನನ್ನ ಗಮನವು ಸದಾಕಾಲ ಅದರ ಮೇಲೆಯೇ ಇರುತ್ತದೆ. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು. ಈಗ ಮುಂದೆ ಸಾಗುವ ಸಮಯ,” ಎಂದು ಮಂಧಾನಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾಟಕೀಯ ಘಟನೆಗಳು:
ಮಂಧಾನಾ ಅವರ ತವರು ಜಿಲ್ಲೆ ಸಾಂಗ್ಲಿಯಲ್ಲಿ ವಿವಾಹವು ನಿಗದಿಯಾಗುವ ಕೆಲವೇ ವಾರಗಳ ಮೊದಲು ನಾಟಕೀಯ ಘಟನೆಗಳು ನಡೆದಿದ್ದವು. ನವೆಂಬರ್ 23 ರಂದು ನಡೆಯಬೇಕಿದ್ದ ವಿವಾಹ ಸಮಾರಂಭದ ಮೊದಲು, ಬೆಳಿಗ್ಗೆ ಮಂಧಾನಾ ಅವರ ತಂದೆಗೆ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರಾಗಿತ್ತು, ಇದು ಮುಖ್ಯ ಸುದ್ದಿಯಾಗಿತ್ತು. ಕುಟುಂಬದ ಮೇಲೆ ಗಮನ ಹರಿಸಲು ಅವರು ತಕ್ಷಣವೇ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದರು.
ಒಂದು ದಿನದ ನಂತರ, ಪಲಾಶ್ ಕೂಡ ಸಾಂಗ್ಲಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ನಂತರ ಹೆಚ್ಚಿನ ತಪಾಸಣೆಗಾಗಿ ಮುಂಬೈಗೆ ಸ್ಥಳಾಂತರಗೊಂಡಿದ್ದರು. ಆದರೆ ಕೆಲವೇ ದಿನಗಳಲ್ಲಿ, ಈ ಮದುವೆ ಕುರಿತು ವದಂತಿಗಳು ಹರಡಲು ಪ್ರಾರಂಭಿಸಿದವು. ಮಂಧಾನಾ ಅವರು ತಮ್ಮ ಎಲ್ಲಾ ವಿವಾಹ ಸಂಬಂಧಿತ ಪೋಸ್ಟ್ಗಳನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕಿದ ನಂತರ ವದಂತಿಗಳು ಹೆಚ್ಚಾದವು. ನಂತರ ಅವರು ವುಮೆನ್ಸ್ ಬಿಗ್ ಬ್ಯಾಷ್ ಲೀಗ್ನಿಂದ ಹಿಂದೆ ಸರಿದ ನಂತರ ಊಹಾಪೋಹಗಳು ಇನ್ನಷ್ಟು ತೀವ್ರಗೊಂಡವು. ಅವರ ಆಪ್ತ ಸ್ನೇಹಿತೆ ಮತ್ತು ತಂಡದ ಸಹ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಸಹ ಮಂಧಾನಾ ಅವರೊಂದಿಗೆ ಈ ಸಂಕಷ್ಟದ ಸಮಯದಲ್ಲಿ ಇರಲು ಲೀಗ್ನಿಂದ ಹಿಂದೆ ಸರಿದರು.
ಮಂಧಾನಾ ಅವರ ತಂದೆ ಮತ್ತು ಪಲಾಶ್ ಇಬ್ಬರೂ ಆಸ್ಪತ್ರೆಯಿಂದ ಬಿಡುಗಡೆಯಾದರೂ, ಯಾವುದೇ ಹೊಸ ವಿವಾಹದ ದಿನಾಂಕವನ್ನು ಖಚಿತಪಡಿಸಲಾಗಿರಲಿಲ್ಲ.


ನಿಮ್ಮ ಕಾಮೆಂಟ್ ಬರೆಯಿರಿ