ಪಣಜಿ: ಗೋವಾದ ‘ಬಿರ್ಚ್ ಬೈ ರೋಮಿಯೋ ಲೇನ್’ (Birch by Romeo Lane) ಕ್ಲಬ್‌ನಲ್ಲಿ ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ಥೈಲ್ಯಾಂಡ್(Thailand)ಗೆ ಪರಾರಿಯಾಗಿದ್ದ ಮಾಲೀಕರನ್ನು ಬಂಧಿಸಲಾಗಿದೆ.
ಮಾಲೀಕರಾದ ಸೌರಭ್ ಮತ್ತು ಗೌರವ್ ಲೂಥ್ರಾ ಸಹೋದರರನ್ನು ಥಾಯ್ಲೆಂಡ್‌ನ ಫುಕೆಟ್‌ನಲ್ಲಿ ಬಂಧಿಸಲಾಗಿದೆ. ಶನಿವಾರ ಈ ಕ್ಲಬ್‌ನಲ್ಲಿ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ 25 ಜನರು ಸಾವಿಗೀಡಾಗಿದ್ದರು.
ಬೆಂಕಿ ಅನಾಹುತ ಸಂಭವಿಸುತ್ತಿದ್ದಂತೆ ಈ ಸಹೋದರರು ದೆಹಲಿಯಿಂದ ಇಂಡಿಗೋ ವಿಮಾನದಲ್ಲಿ ಥಾಯ್ಲೆಂಡ್‌ಗೆ ಪರಾರಿಯಾಗಿದ್ದರು. ಅಗ್ನಿ ಅವಘಡದ ನಂತರ ಅವರ ವಿರುದ್ಧ ಲುಕ್-ಔಟ್ ಸುತ್ತೋಲೆ (Look-Out Circular) ಮತ್ತು ಇಂಟರ್‌ಪೋಲ್ ಬ್ಲೂ ನೋಟಿಸ್ (Interpol Blue Notice) ಹೊರಡಿಸಲಾಗಿತ್ತು.
ಸದ್ಯ, ಗೋವಾ ಪೊಲೀಸರ ತಂಡವು ಸಹೋದರರನ್ನು ತಮ್ಮ ವಶಕ್ಕೆ ಪಡೆಯಲು ಮತ್ತು ವಿಚಾರಣೆಗಾಗಿ ಭಾರತಕ್ಕೆ ಕರೆತರಲು ಥಾಯ್ಲೆಂಡ್‌ಗೆ ಪ್ರಯಾಣಿಸಲಿದೆ ಎಂದು ಮೂಲಗಳು ತಿಳಿಸಿವೆ.
ವಿಮಾನಯಾನ ಸಂಸ್ಥೆಯು ವಿಮಾನಗಳ ರದ್ದು ಮತ್ತು ವಿಳಂಬದಿಂದಾಗಿ ದೇಶಾದ್ಯಂತ ಬಿಕ್ಕಟ್ಟಿನಲ್ಲಿದ್ದ ಸಮಯದಲ್ಲಿ ಈ ಸಹೋದರರು ಇಂಡಿಗೋ ವಿಮಾನದಲ್ಲಿ ತಪ್ಪಿಸಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿತ್ತು.
ಪೊಲೀಸರ ತನಿಖೆಯ ಪ್ರಕಾರ, ಡಿಸೆಂಬರ್ 7ರ ಬೆಳಗಿನ ಜಾವ 1:17ಕ್ಕೆ ಈ ಸಹೋದರರು ಥಾಯ್ಲೆಂಡ್‌ಗೆ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದರು. ಈ ಸಮಯದಲ್ಲಿಯೇ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಗೋವಾದ ನೈಟ್‌ಕ್ಲಬ್‌ನಲ್ಲಿ ಬೆಂಕಿಯನ್ನು ನಂದಿಸುವ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದರು.
ಬಂಧನದ ಭಯದಿಂದ ಭಾರತಕ್ಕೆ ಮರಳಲು ನಿರಾಕರಿಸಿದ ಸಹೋದರರು, ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಅರ್ಪೋರಾ ಕ್ಲಬ್‌ನ ದೈನಂದಿನ ಕಾರ್ಯಾಚರಣೆಗಳನ್ನು ತಾವು ನಡೆಸುತ್ತಿಲ್ಲ ಮತ್ತು ಅಧಿಕಾರಿಗಳ ದ್ವೇಷಪೂರಿತ ನಡವಳಿಕೆಗೆ ತಾವು ಬಲಿಯಾಗಿದ್ದೇವೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು. ಹಾಗೆಯೇ, ಥಾಯ್ಲೆಂಡ್‌ಗೆ ತಮ್ಮ ಪ್ರಯಾಣವು ಪಲಾಯನವಲ್ಲ, ಬದಲಿಗೆ ಇದು ಯೋಜಿತ ವ್ಯಾಪಾರದ ಸಭೆ ಎಂದು ಸಮರ್ಥಿಸಿಕೊಂಡಿದ್ದರು.
ನಿಯಮ ಉಲ್ಲಂಘನೆ ಮತ್ತು ಕ್ರಮ:
ಗೋವಾ ಪೊಲೀಸರ ಎಫ್‌ಐಆರ್ ಪ್ರಕಾರ, ‘ಬಿರ್ಚ್ ಬೈ ರೋಮಿಯೋ ಲೇನ್’ ಕ್ಲಬ್‌ನಲ್ಲಿ ಅಗ್ನಿಶಾಮಕ ಉಪಕರಣಗಳು, ಅಲಾರಂಗಳು, ಸುರಕ್ಷತಾ ಸಾಧನಗಳು ಮತ್ತು ಅಗ್ನಿ ಸುರಕ್ಷತಾ ಪರಿಶೀಲನಾ ದಾಖಲೆಗಳು ಇರಲಿಲ್ಲ. ಇದು ಮೂಲಭೂತ ಅಗ್ನಿ ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿದೆ.
ಈ ನೈಟ್‌ಕ್ಲಬ್‌ನಲ್ಲಿ ಡೆಕ್ ಮತ್ತು ನೆಲ ಮಹಡಿ ಎರಡರಲ್ಲೂ ತುರ್ತು ನಿರ್ಗಮನ ದ್ವಾರಗಳು ಇರಲಿಲ್ಲ. ಇದರಿಂದಾಗಿ ಹಲವಾರು ಮಂದಿ ಬೆಂಕಿಯಲ್ಲಿ ಸಿಲುಕಿಕೊಂಡರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರು ಸಹೋದರರನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪ್ರತಿಜ್ಞೆ ಮಾಡಿದ್ದರು ಮತ್ತು ಕರಾವಳಿ ರಾಜ್ಯದ ಇತರ ಕ್ಲಬ್‌ಗಳಿಗೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಇದಲ್ಲದೆ, ಈ ಸಹೋದರರಿಗೆ ಸೇರಿದ ಗೋವಾದ ಮತ್ತೊಂದು ಕ್ಲಬ್ (ಶ್ಯಾಕ್) ಅಕ್ರಮವಾಗಿ ನಿರ್ಮಿಸಿದ್ದರಿಂದ ಮತ್ತು ಸುರಕ್ಷತಾ ಕ್ರಮಗಳನ್ನು ಹೊಂದಿರದ ಕಾರಣ ಅದನ್ನು ಕೆಡವಲಾಗಿದೆ.
ಸಹ-ಮಾಲೀಕ ಬಂಧನ:
ಮಂಗಳವಾರ, ‘ಬಿರ್ಚ್ ಬೈ ರೋಮಿಯೋ ಲೇನ್’ನ ಸಹ-ಮಾಲೀಕ ಅಜಯಗುಪ್ತಾ ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಆದರೆ, ಅವರು ಕೇವಲ ‘ಸ್ಲೀಪಿಂಗ್ ಪಾಲುದಾರ’ (ಹೂಡಿಕೆ ಮಾತ್ರ ಮಾಡಿರುವ) ಮತ್ತು ನಿಯಮ ಉಲ್ಲಂಘನೆಯ ಬಗ್ಗೆ ತಮಗೆ ತಿಳಿದಿರಲಿಲ್ಲ ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ