ವಿಧಾನಸಭೆಯಲ್ಲಿ ಸಾಮಾಜಿಕ ಬಹಿಷ್ಕಾರ ನಿಷೇಧ ಮಸೂದೆ ಮಂಡನೆ; ನಿಯಮ ಉಲ್ಲಂಘಿಸಿದರೆ 3 ವರ್ಷ ಜೈಲು, 1 ಲಕ್ಷ ದಂಡ

ಬೆಳಗಾವಿ: ಸಭೆ- ಪಂಚಾಯ್ತಿ ಮೂಲಕ ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸುವುದನ್ನು ನಿಷೇಧಿಸುವಮಸೂದೆಯನ್ನು ರಾಜ್ಯ ಸರ್ಕಾರ ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದೆ.
ನಿಯಮಗಳನ್ನು ಉಲ್ಲಂಘಿಸಿ ಸಾಮಾಜಿಕ ಬಹಿಷ್ಕಾರ ಹಾಕುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲು ಈ ಮಸೂದೆ ಅವಕಾಶ ನೀಡುತ್ತದೆ.
ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಇಂದು (ಡಿಸೆಂಬರ್‌ 11) ವಿಧಾನಸಭೆಯಲ್ಲಿ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ(ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಮಸೂದೆ, 2025’ ಅನ್ನು ಮಂಡಿಸಿದರು. ಅದರಲ್ಲಿ ಅವರು 20 ರೀತಿಯ ಸಾಮಾಜಿಕ ಬಹಿಷ್ಕಾರಗಳನ್ನು ಪಟ್ಟಿ ಮಾಡಿದ್ದಾರೆ.

ಮಸೂದೆ ಪ್ರಕಾರ, ಸಾಮಾಜಿಕ ಬಹಿಷ್ಕರಿಸುವ ತೀರ್ಮಾನ ತೆಗೆದುಕೊಂಡವರು, ಬಹಿಷ್ಕಾರ ಮಾಡಲು ನಡೆಸುವ ಸಭೆ, ಪಂಚಾಯ್ತಿ ನಡೆಸಿದವರು ಅಪರಾಧಿಗಳು ಎಂದು ಪರಿಗಣಿಸಲಾಗುತ್ತದೆ.‌ ಬಹಿಷ್ಕಾರಕ್ಕೆ ಒತ್ತಡ ಹೇರಿ ಪರೋಕ್ಷವಾಗಿ ಕಾರಣರಾದವರು, ಬಹಿಷ್ಕಾರದ ಪರವಾಗಿ ಮತ ಹಾಕಿದವರು ಅಥವಾ ಚರ್ಚೆಯಲ್ಲಿ ಪಾಲ್ಗೊಂಡವರನ್ನೂ ಇದಕ್ಕೆ ಹೊಣೆಗಾರರು ಎಂದು ತೀರ್ಮಾನಿಸಲಾಗುತ್ತದೆ.
ಬಹಿಷ್ಕಾರಕ್ಕೆ ಒಳಗಾಗುವವರು ಪೊಲೀಸ್ ಠಾಣೆ ಅಥವಾ ನ್ಯಾಯಾಧೀಶರಿಗೆ ನೇರವಾಗಿ ದೂರು ಸಲ್ಲಿಸಬಹುದಾಗಿದೆ. ಸಾಮಾಜಿಕ ಬಹಿಷ್ಕಾರದಂತಹ ನಿರ್ಧಾರ ತೆಗೆದುಕೊಳ್ಳಲು ನಡೆಸುವ ಸಭೆಗಳ ಕುರಿತು ಮಾಹಿತಿ ಬಂದರೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ನಿಷೇಧಿಸುವ ಆದೇಶ ಹೊರಡಿಸಬಹುದು.ಗ್ರೂಪ್-ಎ ಅಧಿಕಾರಿಗಳನ್ನು ಸಾಮಾಜಿಕ ಬಹಿಷ್ಕಾರ ತಡೆ ಅಧಿಕಾರಿಗಳನ್ನಾಗಿ ನಿಯೋಜಿಸಬಹುದಾಗಿದೆ‌.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

ಗ್ರಾಮ ಅಥವಾ ಸಮುದಾಯದಿಂದ ಹೊರ ಹಾಕುವುದು, ಧಾರ್ಮಿಕ, ಸಾರ್ವಜನಿಕ ಸ್ಥಳಗಳ ಬಳಕೆಗೆ ನಿರ್ಬಂಧ ವಿಧಿಸುವುದು, ಪೂಜಾ ಸ್ಥಳಗಳ ಪ್ರವೇಶಕ್ಕೆ ಅಡ್ಡಿ ಮಾಡುವುದು, ವ್ಯವಹಾರ ಅಥವಾ ಉದ್ಯೋಗದಲ್ಲಿ ತಿರಸ್ಕಾರ ಮಾಡುವುದು ಅಪರಾಧ ಎಂದು ಹೇಳಲಾಗಿದೆ. ಅಲ್ಲದೆ,
ಶಾಲೆ, ಆಸ್ಪತ್ರೆ, ಸಮುದಾಯ ಭವನಗಳ ಪ್ರವೇಶಕ್ಕೆ ತಡೆಯೊಡ್ಡುವುದು, ಸೇವೆಗಳು, ಅವಕಾಶಗಳನ್ನು ನಿರಾಕರಿಸುವುದು, ಸಾಮಾಜಿಕ–ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ತಡೆಯೊಡ್ಡುವುದು, ಮದುವೆ, ಅಂತ್ಯಕ್ರಿಯೆಗಳಲ್ಲಿ ಭಾಗವಹಿಸುವುದಕ್ಕೆ ತಡೆಯೊಡ್ಡುವುದು, ವ್ಯಾಪಾರ, ಸಾಮಾಜಿಕ ಸಂಬಂಧಗಳಿಗೆ ತಡೆಯೊಡ್ಡುವುದು, ಮಕ್ಕಳನ್ನು ಒಟ್ಟಿಗೆ ಆಡಲು ಅಡ್ಡಿ ಪಡಿಸುವುದು, ಲಿಂಗತ್ವದ ಆಧಾರದ ಮೇಲೆ ಭೇದ ಮಾಡುವುದು, ಮಾನವ ಹಕ್ಕುಗಳನ್ನು ನಿರಾಕರಿಸುವುದು, ಬಟ್ಟೆ, ಭಾಷೆ, ಸಾಂಸ್ಕೃತಿಕ ಭೇದ ಎಸಗುವುದನ್ನು ಈ ಪ್ರಸ್ತಾಪಿತ ಮಸೂದೆಯಡಿ ನಿಷೇಧಿಸಲಾಗಿದೆ.

 

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement