
ಹುಬ್ಬಳ್ಳಿ : ಸಾಹಿತಿ ಡಾ. ಸಂಗಮೇಶ ಹಂಡಿಗಿ ಅವರ ಸ್ಮರಣೆಯಲ್ಲಿ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ಕೊಡಮಾಡುವ ರಾಜ್ಯಮಟ್ಟದ ಪ್ರಶಸ್ತಿಗೆ ಈ ವರ್ಷ ಡಾ. ಬಸವರಾಜ ಸಾದರ ಹಾಗೂ ಡಾ. ಶಶಿಕಾಂತ್ ಪಟ್ಟಣ ಅವರು ಆಯ್ಕೆ ಮಾಡಲಾಗಿದೆ.
ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ಕಳೆದ ನಾಲ್ಕು ವರ್ಷಗಳಿಂದ ವಿವಿಧ ಸಾಹಿತ್ಯ ಕ್ಷೇತ್ರದ ಸಾಧಕರನ್ನು ಗುರುತಿಸಿ “ಸಂಗಮ ಸಿರಿ ” ರಾಜ್ಯಮಟ್ಟದ ಪ್ರಶಸ್ತಿ ನೀಡುತ್ತ ಬಂದಿದೆ. ಈ ವರ್ಷ ವಚನ ಸಾಹಿತ್ಯ ಪೂರಕ ಸಾಹಿತ್ಯದಲ್ಲಿ ಕಾರ್ಯ ಮಾಡಿದವರಿಗೆ ” ಸಂಗಮ ಸಿರಿ ” ಪ್ರಶಸ್ತಿ ನೀಡಲು ನಿರ್ಧರಿಸಿದಂತೆ ಈ ಕ್ಷೇತ್ರದಲ್ಲಿ ಕಾರ್ಯ ಮಾಡಿದ ಆಕಾಶವಾಣಿ ನಿರ್ದೇಶಕರಾಗಿ ನಿವೃತ್ತರಾದ ಬೆಂಗಳೂರಿನ ಡಾ. ಬಸವರಾಜ ಸಾದರ ಹಾಗೂ ಮಹಾರಾಷ್ಟ್ರ ಪುಣೆಯ ವಿಜ್ಞಾನಿ ಡಾ. ಶಶಿಕಾಂತ್ ಪಟ್ಟಣ ಅವರನ್ನು ಆಯ್ಕೆ ಮಾಡಲಾಗಿದೆ.
ಡಾ. ಬಸವರಾಜ ಸಾದರ
ಡಾ. ಬಸವರಾಜ ಸಾದರವರು ಆಕಾಶವಾಣಿಯ ದಕ್ಷಿಣ ವಲಯ ನಿರ್ದೇಶಕರಾಗಿ ನಿವೃತ್ತರಾಗಿ ಶರಣ ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ೪೧ ಮೌಲಿಕ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಆಕಾಶವಾಣಿಗಳಲ್ಲಿ ವಚನಗಳ ವಿವರಣೆ ನೀಡುವ ಮೂಲಕ ವಚನಗಳ ಸಾರವನ್ನು ಮನೆ ಮನೆಗೆ ತಲುಪಿಸಿದ ಕೀರ್ತಿ ಇವರದು. ಇದರ ಜೊತೆಗೆ ಕಾರ್ಯಕ್ರಮಗಳ ಸಂಘಟನೆ, ಬರವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸದ್ಯ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದಾರೆ.
ಡಾ. ಶಶಿಕಾಂತ ಪಟ್ಟಣ
ಮೂಲತಃ ರಾಮದುರ್ಗದವರಾದ ಡಾ. ಶಶಿಕಾಂತ ಪಟ್ಟಣ ಅವರು ಸದ್ಯ ಪುಣೆಯಲ್ಲಿ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಸಂಸ್ಥಾಪಕರಾಗಿದ್ದಾರೆ. ಔಷಧೀಯ ವಿಜ್ಞಾನದ ಶ್ರೇಷ್ಠ ವಿಜ್ಞಾನಿಯಾದ ಅವರು ವಚನ ಸಾಹಿತ್ಯದ ಕುರಿತು ಹಲವು ಕೆಲಸಗಳನ್ನು ಮಾಡಿದ್ದಾರೆ. ವಿವಿಧ ಪ್ರಕಾರದ ೬೪ ಕೃತಿಗಳ ರಚನೆ, ಉಪನ್ಯಾಸ, ಸಂಘಟನೆ ಮೂಲಕ ಶರಣ ಸಾಹಿತ್ಯ ಪೂರಕ ಕಾರ್ಯವನ್ನು ಮಾಡಿದ್ದಾರೆ. ಇಬ್ಬರಿಗೂ ತಲಾ ೫,೦೦೦ ರೂ. ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಇದೇ ಡಿಸೆಂಬರ್ ೨೮ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಜಿ. ಬಿ. ಗೌಡಪ್ಪಗೋಳ, ಗೌರವಾಧ್ಯಕ್ಷ ಗಣಪತಿ ಗಂಗೊಳ್ಳಿ, ಕಾರ್ಯಕ್ರಮ ಸಂಯೋಜಕ ಡಾ. ಪ್ರಭು ಗಂಜಿಹಾಳ ತಿಳಿಸಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ