ನವದೆಹಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ದೆಹಲಿ ನ್ಯಾಯಾಲಯವು ರಿಲೀಫ್ ನೀಡಿದೆ. ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯದ (ED) ಹಣ ವರ್ಗಾವಣೆ ಆರೋಪಪಟ್ಟಿಯನ್ನು ಪರಿಗಣಿಸಲು ಮಂಗಳವಾರ ನಿರಾಕರಿಸಿದೆ.
ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ವಿಶಾಲ್ ಗೋಗ್ನೆ ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಇಡಿ ಸಲ್ಲಿಸಿರುವ ಈ ದೂರು ಕಾನೂನುಬದ್ಧವಾಗಿ ಉಳಿಯಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಪಿಎಂಎಲ್‌ಎ (PMLA) ಕಾಯ್ದೆಯಡಿ ಪ್ರಕರಣ ದಾಖಲಿಸಲು ಮೂಲವಾಗಿ ಒಂದು ಎಫ್‌ಐಆರ್ (FIR) ಇರಬೇಕು. ಆದರೆ ಈ ಪ್ರಕರಣವು ಡಾ. ಸುಬ್ರಮಣಿಯನ್ ಸ್ವಾಮಿ ಅವರು ದಾಖಲಿಸಿದ್ದ ಖಾಸಗಿ ದೂರಿನ ಆಧಾರದ ಮೇಲೆ ನಡೆಯುತ್ತಿದೆಯೇ ಹೊರತು, ಯಾವುದೇ ಎಫ್‌ಐಆರ್ ಆಧಾರಿತವಾಗಿಲ್ಲವಾದ್ದರಿಂದ ಪಿಎಂಎಲ್‌ಎ ಅಡಿಯಲ್ಲಿ ಇ.ಡಿ. ಸಲ್ಲಿಸಿರುವ ದೂರು ಸಮರ್ಥನೀಯವಲ್ಲ ಎಂದು ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು (PC ಕಾಯ್ದೆ) ಹೇಳಿದ್ದಾರೆ.
ಪಿಎಂಎಲ್‌ಎ (PMLA) ಶೆಡ್ಯೂಲ್‌ನಲ್ಲಿ ಉಲ್ಲೇಖಿಸಲಾದ ಅಪರಾಧಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ಆಧಾರದ ಮೇಲೆ ಮಾತ್ರ ಇ.ಡಿ. ಹಣ ವರ್ಗಾವಣೆ ಪ್ರಕರಣವನ್ನು ಪ್ರಾರಂಭಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು (EOW) ಈಗಾಗಲೇ ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಇಡಿ ವಾದಗಳನ್ನು ಈಗಲೇ ಆಲಿಸುವುದು ಅಕಾಲಿಕವಾಗುತ್ತದೆ ಎಂದು ಕೋರ್ಟ್ ಹೇಳಿದೆ.
ಎಫ್‌ಐಆರ್ ಇಲ್ಲದ ಹೊರತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ತನಿಖೆ ಅಥವಾ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ಇ.ಡಿ. ಅರ್ಜಿಯನ್ನು ವಜಾಗೊಳಿಸಿತು.
ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿರುವುದರಿಂದ ಮತ್ತು ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ ಎಂದು ಇ.ಡಿ. ಹೇಳಿರುವುದರಿಂದ, ಇಡಿ ಬಯಸಿದರೆ ಪ್ರಕರಣದಲ್ಲಿ ಹೆಚ್ಚಿನ ಸಲ್ಲಿಕೆಗಳನ್ನು ಮಾಡಬಹುದು ಎಂದು ನ್ಯಾಯಾಲಯವು ಹೇಳಿದೆ.
ಏನಿದು ಪ್ರಕರಣ?
ಈ ಪ್ರಕರಣವು ‘ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್’ (AJL) ಸಂಸ್ಥೆಯನ್ನು ‘ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್’ (YIL) ಕಂಪನಿಯು ಸ್ವಾಧೀನಪಡಿಸಿಕೊಂಡಿರುವುದಕ್ಕೆ ಸಂಬಂಧಿಸಿದ್ದಾಗಿದೆ. ಸುಮಾರು 2,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಕೇವಲ 50 ಲಕ್ಷ ರೂಪಾಯಿ ಮೊತ್ತಕ್ಕೆ ವರ್ಗಾಯಿಸಿಕೊಳ್ಳುವ ಮೂಲಕ ಕಾಂಗ್ರೆಸ್ ನಾಯಕರು ಪಕ್ಷದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದೆ.
ಈಗ ನ್ಯಾಯಾಲಯದ ಈ ತೀರ್ಪು ಗಾಂಧಿ ಕುಟುಂಬಕ್ಕೆ ಕಾನೂನು ಸಮರದಲ್ಲಿ ತಾತ್ಕಾಲಿಕ ರಿಲೀಫ್ ತಂದುಕೊಟ್ಟಿದೆ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ ಮತ್ತು ಗಾಂಧಿ ಕುಟುಂಬ ನಿಯಂತ್ರಿತ ಯಂಗ್ ಇಂಡಿಯನ್ ವಿರುದ್ಧ ವಂಚನೆ, ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ನಂಬಿಕೆ ದ್ರೋಹ ಮತ್ತು ಆಸ್ತಿ ದುರುಪಯೋಗದ ಆರೋಪ ಹೊರಿಸಿ ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ ಖಾಸಗಿ ದೂರಿನ ಆಧಾರದ ಮೇಲೆ ನ್ಯಾಷನಲ್ ಹೆರಾಲ್ಡ್ ಪ್ರಕರಣ ನಡೆಯುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ