ಬೆಂಗಳೂರು: ತನ್ನ ಒಂದು ವರ್ಷದ ಹೆಣ್ಣು ಮಗುವನ್ನು ಪಡೆಯುವ ಹಠಕ್ಕೆ ಬಿದ್ದ ಚಿತ್ರ ನಿರ್ಮಾಪಕನೊಬ್ಬ, ಪತ್ನಿಯನ್ನೇ (ಕನ್ನಡದ ಕಿರುತೆರೆ ಮತ್ತು ಚಲನಚಿತ್ರ ನಟಿ) ಅಪಹರಿಸಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ‘ವರ್ಧನ್ ಎಂಟರ್‌ಪ್ರೈಸಸ್’ ಮಾಲೀಕ ಹರ್ಷವರ್ಧನ್ ಈ ಪ್ರಕರಣದ ಮುಖ್ಯ ಆರೋಪಿ ಎಂದು ಹೇಳಲಾಗಿದೆ.
ಹಾಸನ ಜಿಲ್ಲೆಯ ನಿವಾಸಿಯಾದ ಹರ್ಷವರ್ಧನ್ ಮತ್ತು ನಟಿ ಚೈತ್ರಾ ಆರ್. ಅವರ ವಿವಾಹ 2023ರಲ್ಲಿ ಎರಡು ಕುಟುಂಬಗಳ ಒಪ್ಪಿಗೆಯೊಂದಿಗೆ ನಡೆದಿತ್ತು. ಆದರೆ, ಕಳೆದ ಏಳೆಂಟು ತಿಂಗಳಿನಿಂದ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ದಂಪತಿ ಬೇರೆಯಾಗಿ ವಾಸಿಸುತ್ತಿದ್ದರು. ಹರ್ಷವರ್ಧನ್ ಹಾಸನದಲ್ಲಿದ್ದರೆ, ಚೈತ್ರಾ ಅವರು ಬೆಂಗಳೂರಿನ ಮಾಗಡಿ ರಸ್ತೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.
ನಟಿ ಚೈತ್ರಾ ಕುಟುಂಬ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಡಿಸೆಂಬರ್ 7 ರಂದು ಈ ಅಪಹರಣ ನಡೆದಿದೆ. ಶೂಟಿಂಗ್ ನೆಪದಲ್ಲಿ ಹರ್ಷವರ್ಧನ್ ತನ್ನ ಸ್ನೇಹಿತ ಕೌಶಿಕ್ ಎಂಬುವವರ ಮೂಲಕ ಚೈತ್ರಾಗೆ ₹20,000 ಅಡ್ವಾನ್ಸ್ ನೀಡಿ ಮೈಸೂರಿಗೆ ಬರಲು ಹೇಳಿಸಿದ್ದರಂತೆ.
ಡಿಸೆಂಬರ್ 7 ರಂದು ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಮೈಸೂರು ರಸ್ತೆ ಮೆಟ್ರೋ ನಿಲ್ದಾಣದ ಬಳಿ ಚೈತ್ರಾ ಬಂದಿದ್ದಾಗ, ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ನೈಸ್ ರಸ್ತೆ ಮೂಲಕ ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಪಹರಣದ ಬಳಿಕ ಅಂದು ಸಂಜೆ ಚೈತ್ರಾ ಅವರ ತಾಯಿಗೆ ಕರೆ ಮಾಡಿದ್ದ ಹರ್ಷವರ್ಧನ್, “ನಿಮ್ಮ ಮಗಳು ಸುರಕ್ಷಿತವಾಗಿ ಬಿಡುಗಡೆಯಾಗಬೇಕೆಂದರೆ, ನನ್ನ ಮಗುವನ್ನು ಒಪ್ಪಿಸಬೇಕು” ಎಂದು ಬೆದರಿಕೆ ಹಾಕಿದ್ದು, ಅರಸೀಕೆರೆಗೆ ಮಗುವನ್ನು ಕರೆತರುವಂತೆ ಸಂಬಂಧಿಕರಿಗೂ ತಿಳಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಚೈತ್ರಾ ಅವರ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಆತಂಕಗೊಂಡ ಕುಟುಂಬಸ್ಥರು, ತಿಪಟೂರಿನಿಂದ ಬೆಂಗಳೂರಿಗೆ ಮರಳಿದ ನಂತರ ತಡವಾಗಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಹರ್ಷವರ್ಧನ್, ಕೌಶಿಕ್ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಅಪಹರಣ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ