ಬಿಪಿಎಲ್ ಕಾರ್ಡ್ ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ : ಸಚಿವ ಕೆ.ಎಚ್.ಮುನಿಯಪ್ಪ ಮಾಹಿತಿ

ಬೆಳಗಾವಿ: ರಾಜ್ಯ ಸರ್ಕಾರ ಬಿ.ಪಿ.ಎಲ್.ಕಾರ್ಡ್ ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ ನಡೆಸಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಬೆಳಗಾವಿಯಲ್ಲಿ  ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಂಟ್ವಾಳ ಶಾಸಕ ರಾಜೇಶ ನಾಯಕ್ ಹಾಗೂ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ.ಸಿ.ಎನ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರ ಬಿ.ಪಿ.ಎಲ್ ಕಾರ್ಡ್‍ದಾರರ ಆದಾಯ ಮಿತಿಯನ್ನು 1.20 ಲಕ್ಷ ರೂ.ಗಳಿಗೆ ಮಿತಿಗೊಳಿಸಿದೆ. ಆದರೆ ಕೂಲಿ ಕೆಲಸಗಾರರಿಗೂ ಪ್ರತಿದಿನ 500 ರೂ. ಕೂಲಿ ದೊರೆಯುವುದರಿಂದ ಇದರ ಆಧಾರದಲ್ಲಿ ನೋಡುವುದಾದರೆ ಅವರ ಆದಾಯವೂ ವರ್ಷಕ್ಕೆ  1.80 ಲಕ್ಷ ರೂ.ಗಳಷ್ಟಾಗುತ್ತದೆ.  ಈ ಹಿನ್ನಲೆಯಲ್ಲಿ ಮಿತಿಯ ಪರಿಷ್ಕರಣೆಗೆ ಚಿಂತನೆ ನಡೆದಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ರಾಜ್ಯದಲ್ಲಿ 7,75,206 ಶಂಕಾಸ್ಪದ ಪಡಿತರ ಫಲಾನುಭವಿಗಳನ್ನು ಗುರುತಿಸಿದೆ. ರಾಜ್ಯದಲ್ಲಿ 4.53 ಲಕ್ಷ ಬಿ.ಪಿ.ಎಲ್ ಹಾಗೂ 1.25 ಲಕ್ಷ ಎ.ಪಿ.ಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿವೆ. ರಾಜ್ಯದ ಜನಸಂಖ್ಯೆಗೆ ಹೊಲಿಸಿದರೆ ಶೇ.73 ರಷ್ಟು ಕುಟುಂಬಗಳು ಬಿ.ಪಿ.ಎಲ್ ಕಾರ್ಡು ಪಡೆದಿವೆ. ರಾಜ್ಯವು ಜಿ.ಎಸ್.ಟಿ ಪಾವತಿ, ಆದಾಯ ತೆರಿಗೆ ಪಾವತಿಯಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿದೆ. ಈ ಅಂಶವನ್ನು ಪರಿಗಣಿಸಿದರೆ ಬಿ.ಪಿ.ಎಲ್. ಕುಟುಂಬಗಳ ಪ್ರಮಾಣ ಶೇ.50 ರಷ್ಟು ಇರಬೇಕಿತ್ತು. ಆದರೆ ಇದಕ್ಕೂ ಹೆಚ್ಚಿನ ಕುಟುಂಬ ಬಿ.ಪಿ.ಎಲ್. ಕಾರ್ಡು ಪಡೆದಿವೆ. ರಾಜ್ಯದಲ್ಲಿ ಆದ್ಯತಾ ಪಡಿತರ ಚೀಟಿಗಳನ್ನು ಪಡೆಯುವ ಹಾಗೂ ಹೊರಗಿಡುವ ಬಗ್ಗೆ 2017ರಲ್ಲಿ ಮಾನದಂಡಗಳನ್ನು ರೂಪಿಸಲಾಗಿದೆ. ಇದರ ಅನ್ವಯ ಸರ್ಕಾರಿ, ಅನುದಾನಿತ ಸಂಸ್ಥೆಗಳು, ಮಂಡಳಿ, ನಿಗಮ, ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು, ಆದಾಯ, ಸೇವಾ ಹಾಗೂ ಜಿ.ಎಸ್.ಟಿ ತೆರಿಗೆ ಪಾವತಿ ಮಾಡುವ ಕುಟುಂಬಗಳಿಗೆ ಬಿ.ಪಿ.ಎಲ್ ಕಾರ್ಡ್ ನೀಡುವುದಿಲ್ಲ. ಈಗ ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ ನಡೆಸಿರುವುದರಿಂದ, ತಾತ್ಕಾಲಿಕವಾಗಿ ಯಾವುದೇ ಬಿ.ಪಿ.ಎಲ್.ಕಾರ್ಡುಗಳನ್ನು ರದ್ದು ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement