ನವದೆಹಲಿ: ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಪೈಲಟ್ ಒಬ್ಬರು ಸ್ಪೈಸ್ಜೆಟ್ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬೋರ್ಡಿಂಗ್ ಕ್ಯೂ (ಸಾಲನ್ನು) ದಾಟಿ ಮುಂದೆ ಹೋಗಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.
ಅಂಕಿತ್ ದಿವಾನ ಎಂಬ ಪ್ರಯಾಣಿಕ, ತಮ್ಮ ಮುಖದ ಮೇಲೆ ರಕ್ತವಿರುವ ಫೋಟೋವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ತನ್ನ ಏಳು ವರ್ಷದ ಮಗಳು ಹಲ್ಲೆಯನ್ನು ನೋಡಿದ್ದಾಳೆ ಮತ್ತು ಅದರಿಂದಾಗಿ ಆಘಾತಕ್ಕೊಳಗಾಗಿದ್ದಾಳೆ ಎಂದು ಅವರು ಹೇಳಿದ್ದಾರೆ. ಅವರ ಪ್ರಕಾರ, ಈ ಘಟನೆ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ನಡೆದಿದೆ.
ಅಂಕಿತ್ ದಿವಾನ ಪ್ರಕಾರ, ಅವರು ಅವರ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದರು. ಅವರ ಬಳಿ ಪುಟ್ಟ ಮಗು ಇದ್ದ ಕಾರಣ, ವಿಮಾನ ನಿಲ್ದಾಣದ ಸಿಬ್ಬಂದಿ ಅವರಿಗೆ ವಿಶೇಷ ಸಾಲಿನಲ್ಲಿ (Staff Line) ಹೋಗಲು ಅನುಮತಿ ನೀಡಿದ್ದರು. ಈ ವೇಳೆ ಪೈಲಟ್ ವೀರೇಂದ್ರ ಎಂಬುವವರು ಸಾಲನ್ನು ಮುರಿದು ಮುಂದೆ ಹೋಗಲು ಪ್ರಯತ್ನಿಸಿದಾಗ ಅಂಕಿತ ಅವರು ಅದನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೈಲಟ್ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಅನಿಲ್ ದಿವಾನ್ ಆರೋಪಿಸಿದ್ದಾರೆ. ಹಲ್ಲೆಯಿಂದಾಗಿ ಅವರ ಮುಖದ ಮೇಲೆ ರಕ್ತ ಬಂದಿರುವ ಫೋಟೋವನ್ನು ಅವರು ಸಾಮಾಜಿಕ ಜಾಲತಾಣ ‘X’ ನಲ್ಲಿ ಹಂಚಿಕೊಂಡಿದ್ದಾರೆ. “ನನ್ನ ಏಳು ವರ್ಷದ ಮಗಳ ಮುಂದೆಯೇ ಈ ಹಲ್ಲೆ ನಡೆದಿದ್ದು, ಅವಳು ತೀವ್ರ ಆಘಾತಕ್ಕೊಳಗಾಗಿದ್ದಾಳೆ” ಎಂದು ಅವರು ನೋವು ತೋಡಿಕೊಂಡಿದ್ದಾರೆ.
ಸಂತ್ರಸ್ತ ಪ್ರಯಾಣಿಕರು ವಿಮಾನ ತಪ್ಪಿ ಹೋಗುವ ಭಯದಿಂದ ಅಂದು ದೂರು ನೀಡಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ ಈಗ ದೆಹಲಿ ಪೊಲೀಸರಿಗೆ ಟ್ಯಾಗ್ ಮಾಡಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಪೊಲೀಸರು ಲಿಖಿತ ದೂರು ಬಂದ ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ಪ್ರತಿಕ್ರಿಯೆ:
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆಯು, ಪೈಲಟ್ನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಧಿಕೃತ ಕರ್ತವ್ಯಗಳಿಂದ ತೆಗೆದುಹಾಕಲಾಗಿದೆ ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದೃಢಪಡಿಸಿದೆ. ಯಾವುದೇ ರೀತಿಯ ಸ್ವೀಕಾರಾರ್ಹವಲ್ಲದ ನಡವಳಿಕೆಯನ್ನು ಬಲವಾಗಿ ಖಂಡಿಸುತ್ತದೆ ಮತ್ತು ಪ್ರಯಾಣಿಕರಿಗೆ ಉಂಟಾದ ತೊಂದರೆಗೆ ಸಹಾನುಭೂತಿ ಹೊಂದಿದೆ ಎಂದು ಅದು ಹೇಳಿದೆ.
ತನಿಖೆಯ ವರದಿ ಬಂದ ನಂತರ ಶಿಸ್ತು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದೆ. ಘಟನೆಯ ಸಮಯದಲ್ಲಿ ಪೈಲಟ್ ಕರ್ತವ್ಯದಲ್ಲಿ ಇರಲಿಲ್ಲ, ಆತ ಬೇರೊಂದು ವಿಮಾನದಲ್ಲಿ ಪ್ರಯಾಣಿಕನಾಗಿ ಹೋಗುತ್ತಿದ್ದ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ನಾಗರಿಕ ವಿಮಾನಯಾನ ಸಚಿವಾಲಯದ ಸೂಚನೆ:
ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ತಕ್ಷಣವೇ ಪೈಲಟ್ನನ್ನು ವಿಮಾನ ಹಾರಾಟದಿಂದ ತಡೆಯುವಂತೆ ಸೂಚಿಸಿದೆ. ಅಲ್ಲದೆ, ವಿಮಾನ ನಿಲ್ದಾಣದ ಭದ್ರತಾ ಸಂಸ್ಥೆಗಳಾದ BCAS ಮತ್ತು CISF ನಿಂದ ವಿವರವಾದ ವರದಿಯನ್ನು ಕೇಳಿದೆ.


ನಿಮ್ಮ ಕಾಮೆಂಟ್ ಬರೆಯಿರಿ