ಗೋವಾ ಜಿಲ್ಲಾ ಪಂಚಾಯತ ಚುನಾವಣೆ : ಬಿಜೆಪಿಗೆ ಭರ್ಜರಿ ಜಯ; ಕಾಂಗ್ರೆಸ್ಸಿಗೆ ಹಿನ್ನಡೆ

ಪಣಜಿ: ಗೋವಾ ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅಮೋಘ ಗೆಲುವು ಸಾಧಿಸಿದೆ. ಸೋಮವಾರ (ಡಿಸೆಂಬರ್ 22) ಪ್ರಕಟವಾದ ಫಲಿತಾಂಶದಲ್ಲಿ, ಒಟ್ಟು 50 ಜಿಲ್ಲಾ ಪಂಚಾಯತ ಸ್ಥಾನಗಳ ಪೈಕಿ 30 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
2027ರ ವಿಧಾನಸಭಾ ಚುನಾವಣೆಯ ಮುನ್ಸೂಚನೆ ಎಂದೇ ಪರಿಗಣಿಸಲಾಗಿದ್ದ ಈ ಚುನಾವಣೆಯಲ್ಲಿ ಮತದಾರರು ಆಡಳಿತಾರೂಢ ಬಿಜೆಪಿಗೆ ಮತ್ತೊಮ್ಮೆ ಜೈ ಎಂದಿದ್ದಾರೆ. ಕಾಂಗ್ರೆಸ್‌ ಕೇವಲ 08 ಸ್ಥಾನಗಳಲ್ಲಿ ಜಯಗಳಿಸಿದೆ.
ಪಕ್ಷವಾರು ಬಲ ಪ್ರದರ್ಶನ:
ಒಟ್ಟು 50 ಕ್ಷೇತ್ರಗಳ ಪೈಕಿ ವಿವಿಧ ಪಕ್ಷಗಳು ಪಡೆದ ಸ್ಥಾನಗಳ ವಿವರ ಹೀಗಿದೆ:
ಬಿಜೆಪಿ: 30
ಕಾಂಗ್ರೆಸ್: 08
ಪಕ್ಷೇತರರು: 05
ಎಂ.ಜಿ.ಪಿ (MGP): 02
ಎಎಪಿ (AAP): 02 (ಬೆನೌಲಿಮ್ ಮತ್ತು ಕೋಲ್ವಾ)
ಜಿ.ಎಫ್.ಪಿ (GFP): 01
ಆರ್.ಜಿ.ಪಿ (RGP): 02

ಈ ಚುನಾವಣೆಯಲ್ಲಿ ಬಿಜೆಪಿಯು ‘ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ’ದ (MGP) ಜೊತೆ ಮೈತ್ರಿ ಮಾಡಿಕೊಂಡಿತ್ತು. ಕಾಂಗ್ರೆಸ್ ಪಕ್ಷವು ‘ಗೋವಾ ಫಾರ್ವರ್ಡ್ ಪಾರ್ಟಿ’ (GFP) ಜೊತೆ ಮೈತ್ರಿ ಮಾಡಿಕೊಂಡಿತ್ತು.
ಪ್ರಮುಖ ವಿಜೇತರು:
ಬಿಜೆಪಿಯು ಸಿಯೋಲಿಂ, ತಲೈಗಾವೊ, ಸತ್ತರಿ, ಮತ್ತು ಸಾಂಕುಯೆಲಿಮ್‌ನಂತಹ ಪ್ರಮುಖ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಪಕ್ಷವು ಕ್ಯಾಲಂಗುಟ್, ನವೆಲಿಮ್ ಮತ್ತು ಕರ್ಟೋರಿಮ್‌ನಂತಹ ಸಾಂಪ್ರದಾಯಿಕ ಕ್ಷೇತ್ರಗಳಲ್ಲಿ ನೆಲೆ ಉಳಿಸಿಕೊಂಡಿದೆ. ಅರಾಂಬೋಲ್‌ನಲ್ಲಿ ರಾಧಿಕಾ ಪಾಲೇಕರ್ ಮತ್ತು ಬೆಟ್ಕಿ-ಕಾಂಡೋಲಾದಲ್ಲಿ ಸುನಿಲ್ ಜಾಲ್ಮಿ ಪಕ್ಷೇತರರಾಗಿ ಗೆದ್ದು ಗಮನ ಸೆಳೆದಿದ್ದಾರೆ.

ಡಬಲ್ ಇಂಜಿನ್ ಸರ್ಕಾರಕ್ಕೆ ಸಂದ ಜಯ: ಸಿಎಂ ಪ್ರಮೋದ್ ಸಾವಂತ್
ಗೆಲುವಿನ ನಂತರ ಹರ್ಷ ವ್ಯಕ್ತಪಡಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, “ಬಿಜೆಪಿ ಮೇಲೆ ನಂಬಿಕೆ ಇಟ್ಟ ಗೋವೆಯ ಜನತೆಗೆ ಧನ್ಯವಾದಗಳು. ಇದು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಡಬಲ್ ಇಂಜಿನ್ ಸರ್ಕಾರದ ಸಾಧನೆಗೆ ಸಂದ ಜಯ,” ಎಂದು ಹೇಳಿದ್ದಾರೆ. ಅಲ್ಲದೆ, ಪಕ್ಷದ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಿದ್ದಾರೆ.
ಡಿಸೆಂಬರ್ 20 ರಂದು ನಡೆದಿದ್ದ ಈ ಚುನಾವಣೆಯಲ್ಲಿ ಶೇಕಡಾ 70.81ರಷ್ಟು ದಾಖಲೆ ಮತದಾನವಾಗಿತ್ತು. ಒಟ್ಟು 226 ಅಭ್ಯರ್ಥಿಗಳು ಕಣದಲ್ಲಿದ್ದರು. 2012ರಿಂದ ಗೋವಾದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಈ ಫಲಿತಾಂಶವು ಹೊಸ ಚೈತನ್ಯ ನೀಡಿದೆ.

ಪ್ರಮುಖ ಸುದ್ದಿ :-   ಕೇರಳಕ್ಕೆ ಮುಂಗಾರು ಪ್ರವೇಶ: 8 ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಣೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement