ಬಾಂಗ್ಲಾದೇಶದಲ್ಲಿ ಬಿಕ್ಕಟ್ಟು ತೀವ್ರ ; ಢಾಕಾ ಬಾಂಬ್‌ ಸ್ಫೋಟದಲ್ಲಿ 1 ಸಾವು

ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದ ಮೊಘಬಜಾರ್ ಪ್ರದೇಶದಲ್ಲಿ ಬುಧವಾರ ಸಂಜೆ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಫ್ಲೈ ಓವರ್ ಮೇಲಿಂದ ಕಿಡಿಗೇಡಿಗಳು ಎಸೆದ ಕಚ್ಚಾ ಬಾಂಬ್ (ಕಾಕ್‌ಟೈಲ್ ಬಾಂಬ್) ವ್ಯಕ್ತಿಯ ತಲೆಯ ಮೇಲೆ ಬಿದ್ದು ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ‘ಸಿಯಾಮ್’ ಎಂದು ಗುರುತಿಸಲಾಗಿದ್ದು, ಇವರು ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸ್ಫೋಟದ ತೀವ್ರತೆಗೆ ಸಿಯಾಮ್ ಅವರ ತಲೆ ಛಿದ್ರವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಾಳಿಕೋರರು ತಕ್ಷಣವೇ ಪರಾರಿಯಾಗಿದ್ದಾರೆ. ಘಟನೆಯ ನಂತರ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಇಡೀ ಪ್ರದೇಶವನ್ನು ಸುತ್ತುವರಿದಿದ್ದಾರೆ.
ತಾರಿಕ್ ರೆಹಮಾನ್ ಆಗಮನ: ಹೈ ಅಲರ್ಟ್
ಸುಮಾರು 17 ವರ್ಷಗಳ ವನವಾಸದ ನಂತರ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ನಾಯಕ ತಾರಿಕ್ ರೆಹಮಾನ್ ಗುರುವಾರ ಲಂಡನ್‌ನಿಂದ ಸ್ವದೇಶಕ್ಕೆ ಮರಳಲಿದ್ದಾರೆ. ಈ ಸೂಕ್ಷ್ಮ ಸಮಯದಲ್ಲಿ ನಡೆದಿರುವ ಸ್ಫೋಟವು ಭದ್ರತಾ ಪಡೆಗಳನ್ನು ಚಿಂತೆಗೀಡು ಮಾಡಿದೆ. ಢಾಕಾದಾದ್ಯಂತ ‘ಡಬಲ್ ಲೇಯರ್’ ಭದ್ರತೆಯನ್ನು ನಿಯೋಜಿಸಲಾಗಿದೆ.
ಅವರು ಹಿಂದಿರುಗುವ ಮುನ್ನ ಅಧಿಕಾರಿಗಳು ಹೆಚ್ಚಿನ ಜಾಗರೂಕತೆಯನ್ನು ವಹಿಸಿದ್ದಾರೆ. ಬಾಂಗ್ಲಾದೇಶ ಗೃಹ ಸಲಹೆಗಾರ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಮೊಹಮ್ಮದ್ ಜಹಾಂಗೀರ್ ಆಲಂ ಚೌಧರಿ ಅವರು ಕಾನೂನು ಜಾರಿ ಸಂಸ್ಥೆಗಳಿಗೆ ಗರಿಷ್ಠ ಜಾಗರೂಕತೆಯನ್ನು ಕಾಯ್ದುಕೊಳ್ಳಲು ಮತ್ತು ರಾಜಧಾನಿಯಾದ್ಯಂತ ಉನ್ನತ ಹಂತದ ಭದ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement