ಬೆಂಗಳೂರು : ಪ್ರೇಮ ಪ್ರಸ್ತಾವನೆ ನಿರಾಕರಿಸಿದ ಯುವತಿ ಮೇಲೆ ನಡು ರಸ್ತೆಯಲ್ಲೇ ಹಲ್ಲೆ-ದೌರ್ಜನ್ಯ

ಬೆಂಗಳೂರು: ತನ್ನನ್ನು ಪ್ರೀತಿಸು ಎಂದು ಒತ್ತಡ ಹೇರಿದರೂ ಅದನ್ನು ನಿರಾಕರಿಸಿದ ಕಾರಣಕ್ಕೆ ಯುವತಿಯೊಬ್ಬಳ ಮೇಲೆ ನಡುರಸ್ತೆಯಲ್ಲೇ ಹಲ್ಲೆ ನಡೆಸಿ, ಕಿರುಕುಳ ನೀಡಿದ ಆಘಾತಕಾರಿ ಘಟನೆ ರಾಜಧಾನಿಯ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಡಿಸೆಂಬರ್ 22ರಂದು ಮಧ್ಯಾಹ್ನ ಸುಮಾರು 3:20ರ ಸುಮಾರಿಗೆ ಉಲ್ಲಾಳ ಮುಖ್ಯರಸ್ತೆಯ ಜ್ಞಾನಜ್ಯೋತಿ ನಗರದ ಬಳಿಯ ಖಾಸಗಿ ಪಿಜಿ (PG) ಮುಂಭಾಗದಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದ್ದು, ಆರೋಪಿ ನವೀನಕುಮಾರ ಎಂಬಾತ ಕಾರಿನಲ್ಲಿ ಬಂದು ಯುವತಿಯನ್ನು ತಡೆದು ಕಿರುಕುಳ ನೀಡಿದ್ದಾನೆ. ಸ್ಕೂಟಿಯ ಪಕ್ಕದಲ್ಲಿ ಯುವತಿ ನಿಂತಿರುವುದನ್ನು ವಿಡಿಯೊದಲ್ಲಿ ಕಾಣ ಸಿಗುತ್ತದೆ.

ಆರೋಪಿಯು ಕಾರಿನಲ್ಲಿ ಸ್ಥಳಕ್ಕೆ ಬರುತ್ತಾನೆ. ಆಕೆಯ ಪರ್ಸ್ ತೆಗೆದುಕೊಂಡು ಅದನ್ನು ಪರಿಶೀಲಿಸಿದ್ದಾನೆ. ಜತೆಗೆ ಆಕೆಯನ್ನು ಸ್ಪರ್ಶಿಸಿದ್ದಾನೆ. ಯುವತಿ ಸಹಾಯಕ್ಕಾಗಿ ಕೂಗಿಕೊಂಡರೂ ಲೆಕ್ಕಿಸದೆ ಅಸಭ್ಯವಾಗಿ ವರ್ತಿಸಿದ್ದಾನೆ. ನಂತರ ಆ ವ್ಯಕ್ತಿಯು ಯುವತಿಗೆ ಹೊಡೆದು ರಸ್ತೆಯ ಉದ್ದಕ್ಕೂ ಎಳೆದುಕೊಂಡು ಹೋಗಿದ್ದಾನೆ. ಅಲ್ಲದೆ, ಯುವತಿಗೆ ಬಲವಾಗಿ ಹೊಡೆದಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಬಾಧಿತ ಯುವತಿ ಮತ್ತು ಆರೋಪಿ ನವೀನ್ 2024ರ ಸೆಪ್ಟೆಂಬರ್ 30ರಂದು ಇನ್‌ಸ್ಟಾಗ್ರಾಮ್ (Instagram) ಮೂಲಕ ಪರಿಚಯವಾಗಿದ್ದರು. ಆರಂಭದಲ್ಲಿ ಸ್ನೇಹದಿಂದಿದ್ದ ನವೀನ, ನಂತರ ಆಕೆಯನ್ನು ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಲಾರಂಭಿಸಿದ್ದ ಎನ್ನಲಾಗಿದೆ.

ಈತನ ಕಾಟ ತಾಳಲಾರದೆ ಯುವತಿ ತನ್ನ ಕೆಲಸವನ್ನು ಬಿಟ್ಟು, ತಾನು ವಾಸವಿದ್ದ ಪಿಜಿಯನ್ನು ಸಹ ಬದಲಾಯಿಸಿದ್ದರು. ಆದರೂ ಆರೋಪಿ ಆಕೆಯನ್ನು ಹಿಂಬಾಲಿಸಿ ಈ ಕೃತ್ಯ ಎಸಗಿದ್ದಾನೆ.
ಯುವತಿ ನೀಡಿದ ದೂರಿನ ಮೇರೆಗೆ ಜ್ಞಾನಭಾರತಿ ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
“ಆರೋಪಿ ನವೀನ್(29) ನಿರುದ್ಯೋಗಿಯಾಗಿದ್ದು, ಕಳೆದ ಎರಡು-ಮೂರು ತಿಂಗಳಿಂದ ಯುವತಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ಡಿಸೆಂಬರ್ 22ರಂದು ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ,” ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement