ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುರುವಾರ ರಾತ್ರಿ ದುರಂತವೊಂದು ಸಂಭವಿಸಿದೆ. ಮೈಸೂರು ಅರಮನೆಯ ಬಳಿ ಬಲೂನ್ಗಳಿಗೆ ಗ್ಯಾಸ್ ತುಂಬಿಸುವ ಸಿಲಿಂಡರ್ ಸ್ಫೋಟಗೊಂಡು, ಬಲೂನ್ ವ್ಯಾಪಾರಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಹಾಗೂ ಮಹಿಳೆ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗುರುವಾರ ರಾತ್ರಿ ಸುಮಾರು 8:30ರ ವೇಳೆಗೆ ಈ ಘಟನೆ ನಡೆದಿದೆ. ಕ್ರಿಸ್ಮಸ್ ರಜೆ ಹಿನ್ನೆಲೆಯಲ್ಲಿ ಅರಮನೆ ಆವರಣ ಹಾಗೂ ವಸ್ತುಪ್ರದರ್ಶನದ ಬಳಿ ಜನಸಾಗರವೇ ನೆರೆದಿತ್ತು. ಈ ವೇಳೆ ಸೈಕಲ್ನಲ್ಲಿ ಬಲೂನ್ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಸಣ್ಣ ಸಿಲಿಂಡರ್ ಮೂಲಕ ಬಲೂನ್ಗಳಿಗೆ ಹೀಲಿಯಂ ಗ್ಯಾಸ್ ತುಂಬಿಸುತ್ತಿದ್ದಾಗ ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ವ್ಯಾಪಾರಿ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರಿಗೆ ಗಾಯಗಳಾಗಿದೆ ಎಂದು ಹೇಳಲಾಗಿದೆ
.ಗಾಯಗೊಂಡವರನ್ನು ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಓರ್ವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ಸೈಕಲ್ ಮೇಲೆ ಹೀಲಿಯಂ ಬಲೂನ್ ಮಾರುತ್ತಿದ್ದ ವ್ಯಕ್ತಿಯ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಈ ಅವಘಡ ಸಂಭವಿಸಿದೆ. ಮೃತ ವ್ಯಾಪಾರಿ ಸ್ಥಳೀಯ ನಿವಾಸಿ (ಅಂದಾಜು 40 ವರ್ಷ) ಎಂದು ತಿಳಿದುಬಂದಿದ್ದು, ಅವರ ಗುರುತು ಪತ್ತೆ ಹಚ್ಚಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ” ಎಂದು ತಿಳಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ