16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ ; ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ಸಲಹೆ

ಚೆನ್ನೈ: ಆಸ್ಟ್ರೇಲಿಯಾ ಮಾದರಿಯಲ್ಲಿ ಭಾರತದಲ್ಲೂ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು (Social Media) ನಿಷೇಧಿಸುವ ಕಾನೂನು ಜಾರಿಗೆ ತರುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. ಸಮಾಜದ ಮೇಲೆ, ವಿಶೇಷವಾಗಿ ಮಕ್ಕಳ ಮೇಲೆ ಇಂಟರ್ನೆಟ್ ಬೀರುತ್ತಿರುವ ವ್ಯತಿರಿಕ್ತ ಪರಿಣಾಮಗಳನ್ನು ಗಮನಿಸಿ ನ್ಯಾಯಾಲಯ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳಿಗೆ ಅಶ್ಲೀಲ ವಿಷಯಗಳು ಸುಲಭವಾಗಿ ಲಭ್ಯವಾಗುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಿ. ಜಯಚಂದ್ರನ್ ಮತ್ತು ಕೆ.ಕೆ. ರಾಮಕೃಷ್ಣನ್ ಅವರಿದ್ದ ಮಧುರೈ ಪೀಠವು ಈ ನಿರ್ದೇಶನ ನೀಡಿದೆ.
ಇತ್ತೀಚೆಗಷ್ಟೇ (ಡಿಸೆಂಬರ್ 10) ಆಸ್ಟ್ರೇಲಿಯಾ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಸದಂತೆ ಜಗತ್ತಿನಲ್ಲೇ ಮೊದಲ ಬಾರಿಗೆ ಕಟ್ಟುನಿಟ್ಟಿನ ಕಾನೂನು ಜಾರಿಗೆ ತಂದಿದೆ. ಇದೇ ಮಾದರಿಯನ್ನು ಭಾರತದಲ್ಲೂ ಅನುಸರಿಸಲು ಸಾಧ್ಯವೇ ಎಂದು ಕೇಂದ್ರ ಸರ್ಕಾರ ಪರಿಶೀಲಿಸಬೇಕು ಎಂದು ಪೀಠ ತಿಳಿಸಿದೆ.

ಜಾಗೃತಿ ಅಭಿಯಾನ:
ಇಂತಹ ಕಾನೂನು ಜಾರಿಗೆ ಬರುವವರೆಗೆ, ಸರ್ಕಾರವು ಮಕ್ಕಳ ಮೇಲೆ ಇಂಟರ್ನೆಟ್ ಪ್ರಭಾವದ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕು. ಶಾಲಾ ಮಟ್ಟದಲ್ಲಿ ನಡೆಯುತ್ತಿರುವ ಪ್ರಸ್ತುತ ಅಭಿಯಾನಗಳು ಸಾಕಷ್ಟಿಲ್ಲ, ಇವುಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿದೆ.
ಇಂಟರ್ನೆಟ್ ಬಳಕೆದಾರರ ಹಂತದಲ್ಲಿ ನಿಯಂತ್ರಣ ಇರುವುದು ಮುಖ್ಯ. ಪ್ರತಿ ಡಿವೈಸ್‌ಗಳಲ್ಲಿ ‘ಪೇರೆಂಟಲ್ ಕಂಟ್ರೋಲ್ ಆ್ಯಪ್’ಗಳನ್ನು ಅಳವಡಿಸುವ ಬಗ್ಗೆ ಮತ್ತು ಅಶ್ಲೀಲ ಚಿತ್ರಣಗಳ (Child Pornography) ಅಪಾಯದ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ರಾಷ್ಟ್ರೀಯ ಮತ್ತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳು ಈ ಅಂಶದಲ್ಲಿ ಕ್ರಿಯಾ ಯೋಜನೆಯನ್ನು ರೂಪಿಸಬೇಕು ಮತ್ತು ಅದನ್ನು ಅಕ್ಷರಶಃ ಜಾರಿಗೆ ತರಬೇಕು ಎಂದು ಅರ್ಜಿಯನ್ನು ವಿಲೇವಾರಿ ಮಾಡುವಾಗ ಪೀಠವು ಹೇಳಿದೆ

ಪ್ರಮುಖ ಸುದ್ದಿ :-   ಕೇವಲ 23ನೇ ವಯಸ್ಸಿಗೆ 19 ಸರ್ಕಾರಿ ಪರೀಕ್ಷೆ ಪಾಸ್ ! ರಾಷ್ಟ್ರಪತಿಯಿಂದ 'ಅಟ್-ಹೋಮ್' ಗೌರವಕ್ಕೆ ಆಯ್ಕೆಯಾದ ಯುವತಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement