ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯ ಬೆನ್ನಲ್ಲೇ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸಂಸದ ದಿಗ್ವಿಜಯ ಸಿಂಗ್ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ರಾಜಕೀಯ ವಲಯದಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಶಿಸ್ತನ್ನು ಅವರು “ಶ್ಲಾಘಿಸಿರುವುದು” ಕಾಂಗ್ರೆಸ್ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ.
ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಗೂ ಮುನ್ನ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿದ್ದ ದಿಗ್ವಿಜಯ ಸಿಂಗ್, 1990ರ ದಶಕದ ಹಳೆಯ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಎಲ್.ಕೆ. ಅಡ್ವಾಣಿ ಅವರು ವೇದಿಕೆಯ ಮೇಲಿದ್ದರೆ, ನರೇಂದ್ರ ಮೋದಿ ಅವರು ಕೆಳಗೆ ನೆಲದ ಮೇಲೆ ಕುಳಿತಿದ್ದರು.
“ಈ ಚಿತ್ರ ನನಗೆ ಕ್ವೋರಾ (Quora) ತಾಣದಲ್ಲಿ ಸಿಕ್ಕಿತು, ಇದು ತುಂಬಾ ಪ್ರಭಾವಶಾಲಿಯಾಗಿದೆ. ಆರ್‌ಎಸ್‌ಎಸ್‌ನ ಸ್ವಯಂಸೇವಕರು ಮತ್ತು ಜನಸಂಘ/ಬಿಜೆಪಿಯ ಕಾರ್ಯಕರ್ತರು ನಾಯಕರ ಬಳಿ ನೆಲದ ಮೇಲೆ ಕುಳಿತುಕೊಳ್ಳುವ ರೀತಿ, ಆನಂತರ ಅದೇ ಕಾರ್ಯಕರ್ತರು ರಾಜ್ಯದ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನಿಯಾಗುವ ಪರಿಯು ಆ ಸಂಘಟನೆಯ ಶಕ್ತಿಯನ್ನು ತೋರಿಸುತ್ತದೆ. ಜೈ ಸಿಯಾ ರಾಮ್,” ಎಂದು ಸಿಂಗ್ ಬರೆದುಕೊಂಡಿದ್ದರು.
ಪೋಸ್ಟ್ ವೈರಲ್ ಆಗಿ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ದಿಗ್ವಿಜಯ ಸಿಂಗ್, “ಮಾಧ್ಯಮಗಳು ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡಿವೆ. ನಾನು ಸಂಘಟನೆಯನ್ನು ಮಾತ್ರ ಹೊಗಳಿದ್ದೇನೆ. ನಾನು ಆರ್‌ಎಸ್‌ಎಸ್ ಮತ್ತು ಮೋದಿ ಅವರ ಪರಮ ವಿರೋಧಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ ಸುಧಾರಣೆಗೆ ರಾಹುಲ್ ಗಾಂಧಿಗೆ ಕಿವಿಮಾತು
ಕೇವಲ ಬಿಜೆಪಿ ಹೊಗಳಿಕೆಯಲ್ಲದೆ, ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಸುಧಾರಣೆಗಳ ಬಗ್ಗೆಯೂ ಸಿಂಗ್ ಮಾತನಾಡಿದ್ದಾರೆ. ರಾಹುಲ್ ಗಾಂಧಿಯವರನ್ನು ಉದ್ದೇಶಿಸಿ ಬರೆದಿದ್ದ ಅವರು, “ಸಾಮಾಜಿಕ-ಆರ್ಥಿಕ ವಿಷಯಗಳಲ್ಲಿ ನಿಮ್ಮ ನಿಲುವು ಸರಿಯಾಗಿದೆ. ಆದರೆ ಚುನಾವಣಾ ಆಯೋಗದಂತೆ ಕಾಂಗ್ರೆಸ್ ಪಕ್ಷಕ್ಕೂ ಸುಧಾರಣೆಗಳ ಅಗತ್ಯವಿದೆ. ಅಧಿಕಾರ ವಿಕೇಂದ್ರೀಕರಣವಾಗಬೇಕು. ನಿಮ್ಮನ್ನು ಒಪ್ಪಿಸುವುದು ಸುಲಭವಲ್ಲ ಎಂಬುದು ನನಗೆ ಗೊತ್ತು, ಆದರೆ ನೀವು ಇದನ್ನು ಮಾಡಬಲ್ಲಿರಿ,” ಎಂದು ಹೇಳಿದ್ದಾರೆ.
ಇದನ್ನೇ ಅಸ್ತ್ರವಾಗಿಸಿಕೊಂಡ ಬಿಜೆಪಿ ವಕ್ತಾರ ಪ್ರದೀಪ ಭಂಡಾರಿ, “ದಿಗ್ವಿಜಯ್ ಸಿಂಗ್ ಅವರು ರಾಹುಲ್ ಗಾಂಧಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂಬುದು ಇದರಿಂದ ಸಾಬೀತಾಗಿದೆ,” ಎಂದು ವ್ಯಂಗ್ಯವಾಡಿದ್ದಾರೆ.
ಕೇಂದ್ರದ ಮೇಲೆ ಖರ್ಗೆ ವಾಗ್ದಾಳಿ
ಇದೇ ವೇಳೆ ಸಿಡಬ್ಲ್ಯೂಸಿ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಉದ್ಯೋಗ ಖಾತರಿ (MGNREGA) ಯೋಜನೆಯ ಹೆಸರನ್ನು ಬದಲಿಸಿ ಅದನ್ನು ದುರ್ಬಲಗೊಳಿಸುತ್ತಿರುವ ಮೋದಿ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ.
“ಮೋದಿ ಸರ್ಕಾರವು ಯಾವುದೇ ಅಧ್ಯಯನ ಅಥವಾ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸದೆ ಉದ್ಯೋಗ ಖಾತರಿ ಯೋಜನೆಯನ್ನು ರದ್ದುಗೊಳಿಸಿ ಹೊಸ ಕಾನೂನು ಹೇರಿದೆ. ಇದು ಬಡವರ ಹೊಟ್ಟೆಗೆ ಹೊಡೆದು ಬೆನ್ನಿಗೆ ಚೂರಿ ಹಾಕಿದಂತೆ. ಈ ನಿರ್ಧಾರದ ವಿರುದ್ಧ ದೇಶಾದ್ಯಂತ ಚಳುವಳಿ ನಡೆಸುವ ಅಗತ್ಯವಿದೆ,” ಎಂದು ಖರ್ಗೆ ಕರೆ ನೀಡಿದರು.


ನಿಮ್ಮ ಕಾಮೆಂಟ್ ಬರೆಯಿರಿ