ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ನೀಟ್ (NEET) ಪರೀಕ್ಷೆ ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನೆಯ ವೇಳೆ, ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ ದಿಪ್ಕೆ ಅವರ ಮೇಲೆ ಮಹಿಳೆಯೊಬ್ಬರು ಶನಿವಾರ ನೀಲಿ ಶಾಯಿ ಮಾದರಿಯ ದ್ರವವನ್ನು ಎರಚಿದ ಘಟನೆ ಭಾರೀ ಗದ್ದಲಕ್ಕೆ ಕಾರಣವಾಯಿತು. ಹತ್ತಿರದಲ್ಲಿ ನಿಂತಿದ್ದ ಕೆಲವು ಜನರ ಟಿ-ಶರ್ಟ್‌ಗಳ ಮೇಲೂ ಶಾಯಿ ಬಿದ್ದಿದೆ.
ದಿಪ್ಕೆ ಅವರು ತಮ್ಮ ಬೆಂಬಲಿಗರನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮಹಿಳೆ ದ್ರವ ಎರಚುತ್ತಿದ್ದಂತೆಯೇ ವೇದಿಕೆಯತ್ತ ಪಕ್ಷದ ಕಾರ್ಯಕರ್ತರು ಹಾಗೂ ಪ್ರತಿಭಟನಾಕಾರರು ಧಾವಿಸಿದ್ದು, ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಬಳಿಕ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದು, ಆಕೆಯ ಗುರುತು ಹಾಗೂ ದಾಳಿ ನಡೆಸಲು ಕಾರಣವೇನು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಭಿಜಿತ ದಿಪ್ಕೆ ಮಹಿಳೆಯ ಕಡೆಗೆ ನೋಡುತ್ತ ಹಿಂದೆ ಸರಿದರು, ಆದರೆ ಆ ಮಹಿಳೆ ಅವರ ಮೇಲೆ ಶಾಯಿ ಎಸೆಯಲು ಪ್ರಯತ್ನಿಸುತ್ತಲೇ ಇದ್ದಳು. ಬೆಂಬಲಿಗರು ತಕ್ಷಣವೇ ಆಗಮಿಸಿ ಶಾಯಿ ಪಾತ್ರೆಯನ್ನು ಹಿಡಿದಿದ್ದ ಮಹಿಳೆಯ ಕೈಯನ್ನು ಹಿಡಿದರು, ಆದರೆ ಇತರರು ಆಕೆಯನ್ನು ವೇದಿಕೆಯಿಂದ ದೂರ ಕರೆದೊಯ್ದರು. ನಂತರ ಜನರ ಗುಂಪು ಆಕೆಯನ್ನು ಹೊರಗೆ ಕರೆದೊಯ್ಯಿತು.
ಘಟನೆಯ ಬಳಿಕ ಅಭಿಜೀತ್ ದಿಪ್ಕೆ ಅವರು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೊವನ್ನು ಹಂಚಿಕೊಂಡು, “Blue is my colour… Jai Bhim!” ಎಂದು ಬರೆದುಕೊಂಡಿದ್ದಾರೆ.
ಈ ಘಟನೆಗೆ ಕೆಲವೇ ಗಂಟೆಗಳ ಮೊದಲು, ಸಮಾಜ ಸೇವಕ ಸೋನಂ ವಾಂಗ್ಚುಕ್ ಅವರನ್ನು 21ನೇ ದಿನದ ಉಪವಾಸದ ವೇಳೆ ದೆಹಲಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ ಹಿನ್ನೆಲೆಯಲ್ಲಿ, ತಾವು ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ದಿಪ್ಕೆ ಘೋಷಿಸಿದ್ದರು.
ಸೋನಂ ವಾಂಗ್ಚುಕ್ ಆಸ್ಪತ್ರೆಗೆ ದಾಖಲು
ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನು, 20 ದಿನಗಳ ಅನಿರ್ದಿಷ್ಟಾವಧಿಯ ಉಪವಾಸದ ನಂತರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ, ಶನಿವಾರ ಬೆಳಗಿನ ಜಾವ ಜಂತರ್ ಮಂತರ್ ಪ್ರತಿಭಟನಾ ಸ್ಥಳದಿಂದ ಸಫ್ದರ್‌ಜಂಗ್ ಆಸ್ಪತ್ರೆಗೆ ದೆಹಲಿ ಪೊಲೀಸರು ಸ್ಥಳಾಂತರಿಸಿದರು. ಈ ವೇಳೆ ಕೆಲ ಪ್ರತಿಭಟನಾಕಾರರು ಅವರನ್ನು ಕರೆದೊಯ್ಯುವುದನ್ನು ತಡೆಯಲು ಯತ್ನಿಸಿದ ಕಾರಣ, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಕೆಲಕಾಲ ತಳ್ಳಾಟ-ನೂಕಾಟವೂ ನಡೆಯಿತು.
ನೀಟ್ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸುತ್ತಿರುವ ಸಿಜೆಪಿ ನೇತೃತ್ವದ ಹೋರಾಟಕ್ಕೆ ಬೆಂಬಲ ಸೂಚಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ, ವಾಂಗ್ಚುಕ್ ಅವರು ಜೂನ್ 28ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.
ವಾಂಗ್ಚುಕ್ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿರುವ ವೈದ್ಯರ ಪ್ರಕಾರ, ಉಪವಾಸದ ಅವಧಿಯಲ್ಲಿ ಅವರು ಸುಮಾರು 9.5 ಕೆ.ಜಿ. ತೂಕ ಕಳೆದುಕೊಂಡಿದ್ದು, ಅವರ ರಕ್ತದೊತ್ತಡ ಹಾಗೂ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ಉಂಟಾಗುತ್ತಿರುವ ಏರಿಳಿತವನ್ನು ವೈದ್ಯರು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ.
ಇದೇ ವೇಳೆ, ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಕಾರ್ಯಾಚರಣೆಯ ಸಂದರ್ಭದಲ್ಲಿ ಹಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರ ವಿರುದ್ಧ ಪೊಲೀಸ್ ಕ್ರಮವೂ ಕೈಗೊಳ್ಳಲಾಗಿದೆ ಎಂದು ಅಭಿಜೀತ ದಿಪ್ಕೆ ಆರೋಪಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ