ನವದೆಹಲಿ: ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಶಾಸಕರಾದ ಕುಲದೀಪ ಸಿಂಗ್ ಸೆಂಗರಗೆ ಜಾಮೀನು ನೀಡಿದ ಹಾಗೂ ಆತನಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ್ದ ದೆಹಲಿ ಹೈಕೋರ್ಟ್ ಆದೇಶ ಜಾರಿಯಾಗದಂತೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.
ನ್ಯಾಯಪೀಠವು ಕುಲದೀಪ್ ಸಿಂಗ್ ಸೆಂಗಾರ್ ಅವರಿಗೆ ನೋಟಿಸ್ ಜಾರಿ ಮಾಡಿ, ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯಿಸುವಂತೆ ನಿರ್ದೇಶಿಸಿದೆ.
ಸೆಂಗಾರ್ ಅವರ ಶಿಕ್ಷೆಯನ್ನು ಅಮಾನತುಗೊಳಿಸಿದ ಡಿಸೆಂಬರ್ 23 ರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಮತ್ತು ನ್ಯಾಯಮೂರ್ತಿಗಳಾದ ಜೆಕೆ ಮಹೇಶ್ವರಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿತು. ಸಿಬಿಐ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಸೆಂಗಾರ ಪರವಾಗಿ ಸಿದ್ಧಾರ್ಥ್ ದವೆ ಮತ್ತು ಹರಿಹರನ್ ಸೇರಿದಂತೆ ಹಿರಿಯ ವಕೀಲರು ಪೀಠದ ಮುಂದೆ ಹಾಜರಾಗಿದ್ದರು.
ಸಿಬಿಐ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಆರೋಪಿ ಪರವಾಗಿ ಹಾಜರಿದ್ದ ಹಿರಿಯ ವಕೀಲರ ವಾದ ಆಲಿಸಿದ್ದೇವೆ. ಇಲ್ಲಿ ಹಲವು ಮಹತ್ವದ ಕಾನೂನು ಪ್ರಶ್ನೆಗಳು ಉದ್ಭವಿಸುತ್ತಿವೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ನಾಲ್ಕು ವಾರಗಳಲ್ಲಿ ಪ್ರತಿವಾದ ಸಲ್ಲಿಸಬೇಕು. ಸಾಮಾನ್ಯವಾಗಿ ದೋಷಾರೋಪಿತ ಅಥವಾ ವಿಚಾರಣಾಧೀನ ಕೈದಿಯನ್ನು ಬಿಡುಗಡೆ ಮಾಡಿದ ಆದೇಶಗಳಿಗೆ, ಆ ವ್ಯಕ್ತಿಯ ವಾದವನ್ನು ಕೇಳದೆ ಈ ನ್ಯಾಯಾಲಯ ತಡೆ ನೀಡುವುದಿಲ್ಲ ಎಂಬ ಅರಿವು ನಮಗಿದೆ. ಆದರೆ, ಈ ಪ್ರಕರಣದ ವಿಶಿಷ್ಟ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಪ್ರತ್ಯೇಕ ಅಪರಾಧಕ್ಕಾಗಿ ದೋಷಿ ಎಂದು ಸಾಬೀತಾಗಿರುವುದರಿಂದ ಡಿಸೆಂಬರ್ 23ರ ದೆಹಲಿ ಹೈಕೋರ್ಟ್ ಆದೇಶ ಜಾರಿಗೆ ತಡೆ ನೀಡಲಾಗುತ್ತಿದೆ. ಹೀಗಾಗಿ ಪ್ರತಿವಾದಿಯನ್ನು ಆ ಆದೇಶದ ಆಧಾರದ ಮೇಲೆ ಬಿಡುಗಡೆ ಮಾಡಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಸಿಬಿಐ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದರು. ಇದು ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಘೋರ ಅತ್ಯಾಚಾರ ಪ್ರಕರಣವಾಗಿದ್ದು, ಐಪಿಸಿ ಸೆಕ್ಷನ್ 376 ಹಾಗೂ ಪೋಕ್ಸೊ ಕಾಯಿದೆಯ 5 ಮತ್ತು 6ನೇ ಸೆಕ್ಷನ್‌ಗಳ ಅಡಿಯಲ್ಲಿ ಎರಡು ಅಂಶಗಳಲ್ಲಿ ಸೆಂಗರ ದೋಷಿಯಾಗಿದ್ದಾರೆ ಎಂದು ಅವರು ತಿಳಿಸಿದರು. ಅಪರಾಧ ನಡೆದ ವೇಳೆ ಸಂತ್ರಸ್ತೆ 15 ವರ್ಷ 10 ತಿಂಗಳ ವಯಸ್ಸಿನವಳಾಗಿದ್ದಳು ಎಂಬುದು ದಾಖಲೆಯಲ್ಲಿದೆ ಎಂದು ಸಿಬಿಐ ಒತ್ತಿಹೇಳಿತು.
ಸೆಂಗರ್ ಈಗಾಗಲೇ ಗರಿಷ್ಠ 7 ವರ್ಷಗಳ ಶಿಕ್ಷೆ ಅನುಭವಿಸಿದ್ದಾರೆ ಎಂಬ ಕಾರಣ ನೀಡಿ ಹೈಕೋರ್ಟ್ ಶಿಕ್ಷೆಯನ್ನು ಅಮಾನತುಗೊಳಿಸಿದ್ದನ್ನು ಸಿಬಿಐ ತೀವ್ರವಾಗಿ ವಿರೋಧಿಸಿತು. ತಿದ್ದುಪಡಿಯ ನಂತರ ಇಂತಹ ಅಪರಾಧಗಳಿಗೆ ಕನಿಷ್ಠ 20 ವರ್ಷಗಳ ಜೈಲು ಶಿಕ್ಷೆ ಇದೆ ಎಂದು ಸಿಬಿಐ ವಾದಿಸಿದರೂ, ಆ ತಿದ್ದುಪಡಿ ಅಪರಾಧ ನಡೆದ ಬಳಿಕ ಜಾರಿಗೆ ಬಂದಿರುವುದರಿಂದ ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು.


ನಿಮ್ಮ ಕಾಮೆಂಟ್ ಬರೆಯಿರಿ