ಕರ್ನಾಟಕದಲ್ಲಿ ದಾಖಲೆ ಮಟ್ಟದ ಚಳಿ: ಕಳೆದ 20 ವರ್ಷಗಳಲ್ಲೇ ಅತ್ಯಂತ ಶೀತಲ ಹವಾಮಾನ…!

ಬೆಂಗಳೂರು : ಕರ್ನಾಟಕದಲ್ಲಿ ಈ ವರ್ಷ ಚಳಿಯ ತೀವ್ರತೆ ಮಿತಿಮೀರಿದ್ದು, ಕಳೆದ ಎರಡು ದಶಕಗಳಲ್ಲಿ ರಾಜ್ಯದ ಅರ್ಧದಷ್ಟು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು ದಾಖಲೆ ಮಟ್ಟಕ್ಕೆ ಕುಸಿದಿದೆ. ಇದು ಕೇವಲ ಸಾಂದರ್ಭಿಕ ಬದಲಾವಣೆಯಲ್ಲ, ಬದಲಿಗೆ ದೀರ್ಘಕಾಲದ ಹವಾಮಾನ ವೈಪರೀತ್ಯದ ಸೂಚನೆಯಾಗಿದೆ ಎಂದು ದತ್ತಾಂಶಗಳು ತಿಳಿಸಿವೆ.
ರಾಜ್ಯದಲ್ಲಿ ತಾಪಮಾನದ ವ್ಯವಸ್ಥಿತ ದಾಖಲೆಗಳನ್ನು ಸುಮಾರು ಒಂದು ಶತಮಾನದಿಂದ ನಿರ್ವಹಿಸಲಾಗುತ್ತಿದ್ದರೂ, ಹೆಚ್ಚಿನ ಜಿಲ್ಲೆಗಳಲ್ಲಿ ಸಾರ್ವಕಾಲಿಕ ಕನಿಷ್ಠ ತಾಪಮಾನ ದಾಖಲಾಗಿರುವುದು 2005ರ ನಂತರ ಎಂಬುದು ಗಮನಾರ್ಹ ವಿಷಯ. ಇದು ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವರ್ತನೆಯಲ್ಲಿನ ದೊಡ್ಡ ಬದಲಾವಣೆಯನ್ನು ತೋರಿಸುತ್ತಿದೆ.
ತಾಪಮಾನದ ವಿವರ:
ಹಲವು ಜಿಲ್ಲೆಗಳಲ್ಲಿ ಕಳೆದ 20 ವರ್ಷಗಳಲ್ಲೇ ಹತ್ತು ಅತ್ಯಂತ ಶೀತಲ ವರ್ಷ ಕಂಡುಬಂದಿವೆ:
ಬೆಂಗಳೂರು ಗ್ರಾಮಾಂತರ ಜಿಲ್ಲೆ 9.5 ಡಿಗ್ರಿ ಸೆಲ್ಸಿಯಸ್, ಮೈಸೂರು ಜಿಲ್ಲೆ  8.1 ಡಿಗ್ರಿ ಸೆಲ್ಸಿಯಸ್, ರಾಯಚೂರು ಜಿಲ್ಲೆ 7.1 ಡಿಗ್ರಿ ಸೆಲ್ಸಿಯಸ್, ವಿಜಯಪುರ ಜಿಲ್ಲೆ 6.0 ಡಿಗ್ರಿ ಸೆಲ್ಸಿಯಸ್, ಬೀದರ 5.6 ಡಿಗ್ರಿ ಸೆಲ್ಸಿಯಸ್, ಬಾಗಲಕೋಟೆ ಜಿಲ್ಲೆಯಲ್ಲಿ 2022ರಿಂದ ಈಚೆಗೆ 8 ಬಾರಿ ಕನಿಷ್ಠ ತಾಪಮಾನ (6.6 ಡಿಗ್ರಿ) ದಾಖಲಾಗಿದೆ. ಕಲಬುರಗಿ, ಚಿತ್ರದುರ್ಗ, ಹಾಸನ ಮತ್ತು ಚಿಕ್ಕಮಗಳೂರಿನಲ್ಲೂ ತಾಪಮಾನವು ಪದೇ ಪದೇ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಕ್ಕೆ ಇಳಿಯುತ್ತಿದೆ.
ಈ ಬದಲಾವಣೆಗೆ ಕಾರಣಗಳೇನು?
ಹವಾಮಾನ ತಜ್ಞರ ಪ್ರಕಾರ, ಈ ತೀವ್ರ ಚಳಿಗೆ ಹಲವು ಕಾರಣಗಳಿವೆ.  ಪಾಶ್ಚಿಮಾತ್ಯ ಮಾರುತಗಳ ಅಡಚಣೆ ಮತ್ತು ಮೇಲ್ಮಟ್ಟದ ಗಾಳಿಯ ಮಾದರಿಯಲ್ಲಿನ ಬದಲಾವಣೆ ಇದಕ್ಕೆ ಕಾರಣವಾದ ಅಂಶಗಳಲ್ಲಿ ಒಂದು.
ಪೆಸಿಫಿಕ್ ಮಹಾಸಾಗರದಲ್ಲಿನ ‘ಲಾ ನಿನಾ’ ವಿದ್ಯಮಾನವು ಜಾಗತಿಕವಾಗಿ ತಾಪಮಾನ ಇಳಿಕೆಗೆ ಕಾರಣವಾಗಿದೆ. ಅಲ್ಲದೆ,  ಈ ಬಾರಿ ಮುಂಗಾರು ಮಳೆ ದೀರ್ಘಕಾಲದವರೆಗೆ ಇದ್ದದ್ದು ಚಳಿಗಾಲದ ತೀವ್ರತೆಗೆ ಪೂರಕ ವಾತಾವರಣ ನಿರ್ಮಿಸಿದೆ.
ಮಾನವ ನಿರ್ಮಿತ ಕಾರಣಗಳು: ಅರಣ್ಯ ನಾಶ ಮತ್ತು ಭೂಬಳಕೆಯ ಬದಲಾವಣೆಯಿಂದಾಗಿ ಭೂಮಿಯ ಶಾಖ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿದೆ (Clear-sky radiation cooling).
ಮುಂದಿನ ದಿನಗಳು ಹೇಗಿರಲಿವೆ?
ಡಿಸೆಂಬರ್‌ಗಿಂತ ಜನವರಿ ತಿಂಗಳಲ್ಲಿ ಚಳಿ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ವಿಶೇಷವಾಗಿ ಧಾರವಾಡ, ಬೆಳಗಾವಿ, ಹಾವೇರಿ, ದಾವಣಗೆರೆ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಜನವರಿಯಲ್ಲಿ ತಾಪಮಾನ ಮತ್ತಷ್ಟು ಕುಸಿಯಬಹುದು ಎಂದು ಅಂದಾಜಿಸಲಾಗಿದೆ.
 ಈ ತೀವ್ರ ಚಳಿಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಹಾಗೂ ಬೆಳೆಗಳಿಗೆ ಶಿಲೀಂಧ್ರ ರೋಗಗಳು (Fungal diseases) ತಗುಲುವ ಸಾಧ್ಯತೆ ಇರುವುದರಿಂದ ರೈತರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement