ಅರಾವಳಿ ಪರ್ವತ ಶ್ರೇಣಿ ; ತನ್ನ ಆದೇಶಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ : ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಹಬ್ಬಿರುವ ಅರಾವಳಿ ಪರ್ವತ ಶೇಣಿಗೆ ಸಂಬಂಧಿಸಿದಂತೆ ತಾನು ಅನುಮೋದಿಸಿದ್ದ ಕೆಲವು ಅಂಶಗಳ ಬಗ್ಗೆ ಸ್ಪಷ್ಟೀಕರಣ ಅಗತ್ಯವಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್‌ ಕಳೆದ ತಿಂಗಳು ತಾನು ನೀಡಿದ್ದ ತೀರ್ಪಿಗೆ ಸೋಮವಾರ ತಾತ್ಕಾಲಿಕ ತಡೆ ನೀಡಿದೆ.
ಜೊತೆಗೆ, ಅಧಿಕಾರಿಗಳನ್ನು ಬಹುತೇಕ ಒಳಗೊಂಡಿದ್ದ ಹಿಂದಿನ ಸಮಿತಿಯ ಶಿಫಾರಸುಗಳಿಂದ ಉಂಟಾಗುವ ಪರಿಸರ ಪರಿಣಾಮಗಳನ್ನು ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.
ಗಣಿಗಾರಿಕೆ ಉದ್ದೇಶಕ್ಕಾಗಿ ಅರಾವಳಿ ಶ್ರೇಣಿಯನ್ನು ವ್ಯಾಖ್ಯಾನಿಸಲು ರಚಿಸಲಾದ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ನೀಡಲಾಗಿದ್ದ ಇತ್ತೀಚಿನ ತೀರ್ಪಿಗೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ, ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಹಾಗೂ ಎ ಜೆ ಮಸೀಹ್‌ ಅವರಿದ್ದ ಪೀಠ ತಡೆ ನೀಡಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ಅರಾವಳಿ ಪರ್ವತ ಕುರಿತು ಸುಪ್ರೀಂ ಕೋರ್ಟ್‌ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ ವ್ಯಾಪಕ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಈ ಆದೇಶ ನೀಡಿದೆ. ಅರಾವಳಿ ಬೆಟ್ಟಗಳಲ್ಲಿ ಗಣಿಗಾರಿಕೆಯನ್ನು ನಿಯಂತ್ರಿಸುವ ಸಲುವಾಗಿ ರಚಿಸಲಾದ ಸಮಿತಿಯ ಶಿಫಾರಸುಗಳ ಆಧಾರದಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಈ ಕುರಿತು ಕೇಂದ್ರ ಸರ್ಕಾರ ಮತ್ತು ಅರಾವಳಿ ವ್ಯಾಪ್ತಿಯ ನಾಲ್ಕು ರಾಜ್ಯಗಳಾದ ರಾಜಸ್ಥಾನ, ಗುಜರಾತ, ದೆಹಲಿ ಮತ್ತು ಹರಿಯಾಣಗಳಿಗೆ  ಪ್ರತಿಕ್ರಿಯೆ ನೀಡುವಂತೆ ತಿಳಿಸಿದೆ.
ಪರಿಸರ ರಕ್ಷಣೆಯನ್ನು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್, ಹಿಂದಿನ ಸಮಿತಿಯ ವರದಿ ಅಥವಾ ಅರಾವಳಿ ಶ್ರೇಣಿಯ ಕುರಿತು ನ್ಯಾಯಾಲಯದ ತೀರ್ಪನ್ನು ಜಾರಿಗೆ ತರುವ ಮೊದಲು ತಜ್ಞರ ಪರಿಶೀಲನೆ ಅಗತ್ಯ ಎಂದು ಹೇಳಿದೆ.
ಸಮಿತಿ ನೀಡಿರುವ ಶಿಫಾರಸುಗಳು ಹಾಗೂ ಸುಪ್ರೀಂ ಕೋರ್ಟ್‌ನ ಈ ಹಿಂದಿನ ಅವಲೋಕನಗಳನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ. ಈ ಪ್ರಕರಣವನ್ನು 2026ರ ಜನವರಿ 21ರಂದು ವಿಚಾರಣೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನ್ಯಾಯಾಲಯದ ಆದೇಶಗಳು, ಸರ್ಕಾರದ ಪಾತ್ರ ಸೇರಿದಂತೆ ಹಲವು ವಿಷಯಗಳಲ್ಲಿ ತಪ್ಪು ಕಲ್ಪನೆಗಳು ಉಂಟಾಗಿದ್ದವು. ಈ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ರಚಿಸಿ, ಅದು ನೀಡಿದ್ದ ವರದಿಯನ್ನು ನ್ಯಾಯಾಲಯ ಸ್ವೀಕರಿಸಿದೆ ಎಂದರು.
ಸಿಜೆಐ ಸೂರ್ಯ ಕಾಂತ ಅವರು, ಅರಾವಳಿ ಪರ್ವತಗಳಿಗೆ ಸಂಬಂಧಿಸಿದ ಗೊಂದಲಗಳನ್ನು ನಿವಾರಿಸಲು ಸ್ವತಂತ್ರ ತಜ್ಞರ ಅಭಿಪ್ರಾಯ ಅಗತ್ಯವಿದೆ ಎಂದು ಹೇಳಿದರು.
ಕಳೆದ ತಿಂಗಳು ಅಂಗೀಕರಿಸಲಾದ ನಿರ್ಬಂಧಿತ ಗುರುತಿಸುವಿಕೆಯ ನಿರ್ಧಾರದಿಂದ ಗಣಿಗಾರಿಕೆಯಂತಹ ಚಟುವಟಿಕೆಗಳಿಗೆ ಅನುಮತಿ ದೊರಕುವ ಪ್ರದೇಶಗಳ ವ್ಯಾಪ್ತಿ ಹೆಚ್ಚಾಗಬಹುದೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಪೀಠ ತಿಳಿಸಿತು.
ಹೊಸ ವ್ಯಾಖ್ಯಾನದಡಿ ಗುರುತಿಸಲಾದ ಅರಾವಳಿ ಪ್ರದೇಶದಲ್ಲಿ ನಡೆಸಲಾಗುವ ನಿಯಂತ್ರಿತ ಅಥವಾ ಸ್ಥಿರ ಗಣಿಗಾರಿಕೆಯು ಪರಿಸರಕ್ಕೆ ಹಾನಿಕಾರಕ ಪರಿಣಾಮ ಉಂಟುಮಾಡಬಹುದೇ ಎಂಬುದನ್ನೂ ಪರಿಶೀಲಿಸಬೇಕಿದೆ ಎಂದು ಸಿಜೆಐ ಹೇಳಿದರು. ಈ ಸಂಬಂಧ ಕೇಂದ್ರ ಹಾಗೂ ಸಂಬಂಧಪಟ್ಟ ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿದ ಪೀಠ ಅಂತಿಮ ತೀರ್ಪು ಪ್ರಕಟವಾಗುವವರೆಗೆ ಹಿಂದೆ ನ್ಯಾಯಾಲಯ ನೀಡಿದ್ದ ನಿರ್ದೇಶನಗಳು ಮತ್ತು ಸಮಿತಿಯ ಶಿಫಾರಸುಗಳನ್ನು ಅಮಾನತಿನಲ್ಲಿರಿಸಲಾಗಿದೆ ಎಂದು ಆದೇಶಿಸಿತು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement