ಅಸ್ತಿತ್ವದಲ್ಲೇ ಇಲ್ಲದ ಅಪಾರ್ಟ್​ಮೆಂಟ್ 12 ಕೋಟಿ ರೂ.ಗಳಿಗೆ ಮಾರಾಟ…! 200 ಕೋಟಿ ರೂ. ಆಸ್ತಿ ಹಗರಣ ಭೇದಿಸಿದ ಪೊಲೀಸರು…!

ನವದೆಹಲಿ: ಗುರುಗ್ರಾಮದ ಪ್ರತಿಷ್ಠಿತ ‘ಡಿಎಲ್‌ಎಫ್ ಕೆಮೆಲಿಯಾಸ್’ ನಲ್ಲಿ ಅಸ್ತಿತ್ವದಲ್ಲೇ ಇಲ್ಲದ ಐಷಾರಾಮಿ ಅಪಾರ್ಟ್‌ಮೆಂಟ್ ಅನ್ನು 12 ಕೋಟಿ ರೂಪಾಯಿಗೆ ಮಾರಾಟ ಮಾಡಿ ವಂಚಿಸಿದ್ದ ಬೃಹತ್ ಜಾಲವನ್ನು ದೆಹಲಿ ಪೊಲೀಸರು ಪತ್ತೆಹಚ್ಚಿದ್ದಾರೆ. ನಕಲಿ ಬ್ಯಾಂಕ್ ಹರಾಜು ದಾಖಲೆಗಳನ್ನು ಸೃಷ್ಟಿಸಿ ಈ ವಂಚನೆ ಮಾಡಲಾಗಿದ್ದು, ಈ ಜಾಲವು ವಿವಿಧ ರಾಜ್ಯಗಳಲ್ಲಿ ಸುಮಾರು 200 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಲೂಟಿ ಮಾಡಿರುವ ಶಂಕೆ ವ್ಯಕ್ತವಾಗಿದೆ.
ರಾಷ್ಟ್ರ ರಾಜಧಾನಿ ಎನ್‌ಸಿಆರ್‌ನ ಅತ್ಯಂತ ಪ್ರೀಮಿಯಂ ವಸತಿ ಯೋಜನೆಗಳಲ್ಲಿ ಒಂದಾದ ಡಿಎಲ್‌ಎಫ್ ಕೆಮೆಲಿಯಾಸ್‌ನಲ್ಲಿ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಮನೆ ಕೊಡಿಸುವುದಾಗಿ ನಂಬಿಸಿ ಸಂತ್ರಸ್ತರಿಗೆ ನಕಲಿ ಹರಾಜು ಪತ್ರಗಳನ್ನು ತೋರಿಸಲಾಗಿತ್ತು. ಆರೋಪಿಗಳ ಕಂಪನಿಯು ಬ್ಯಾಂಕ್ ಹರಾಜಿನ ಮೂಲಕ ಈ ಆಸ್ತಿಯನ್ನು ಖರೀದಿಸಲಾಗಿದೆ ಮತ್ತು ಆಸ್ತಿಯನ್ನು ತಕ್ಷಣವೇ ವರ್ಗಾವಣೆ ಮಾಡಬಹುದು ಎಂದು ಜನರಿಗೆ ನಂಬಿಸಲಾಗಿತ್ತು. ಇದನ್ನು ನಿಜವೆಂದು ನಂಬಿದ ಅನೇಕರು ಕಳೆದ ವರ್ಷ ಆಗಸ್ಟ್ ಮತ್ತು ಅಕ್ಟೋಬರ್ ನಡುವೆ ಆರ್‌ಟಿಜಿಎಸ್ (RTGS) ಮತ್ತು ಡಿಮ್ಯಾಂಡ್ ಡ್ರಾಫ್ಟ್‌ಗಳ ಮೂಲಕ 12 ಕೋಟಿ ರೂಪಾಯಿ ಪಾವತಿಸಿದ್ದರು.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

ತನಿಖೆಯಲ್ಲಿ ಬಯಲಾದ ಅಕ್ರಮ ಹಣ ವರ್ಗಾವಣೆ
ಹಣ ನೀಡಿದವರು ಹೆಚ್ಚಿನ ಪರಿಶೀಲನೆಗಾಗಿ ಬ್ಯಾಂಕನ್ನು ಸಂಪರ್ಕಿಸಿದಾಗ ಎಲ್ಲಾ ದಾಖಲೆಗಳು ನಕಲಿ ಎಂಬ ವಿಷಯ ಬೆಳಕಿಗೆ ಬಂದಿದೆ. ಯಾವುದೇ ಹರಾಜು ಪ್ರಕ್ರಿಯೆ ನಡೆದಿಲ್ಲ ಮತ್ತು ಮಾರಾಟದ ಪ್ರಮಾಣಪತ್ರಗಳು, ರಶೀದಿಗಳು ಸಂಪೂರ್ಣ ನಕಲಿ ಎಂದು ಪೊಲೀಸರು ದೃಢಪಡಿಸಿದ್ದಾರೆ. ಹಣಕಾಸು ತನಿಖೆಯ ವೇಳೆ, ಈ ಹಣವು ಮುಖ್ಯ ಆರೋಪಿ ಮೋಹಿತ್ ಗೋಗಿಯಾ ನಡೆಸುತ್ತಿದ್ದ ಹಣಕಾಸು ಮತ್ತು ಲೈಸೆನ್ಸಿಂಗ್ ಕಂಪನಿಗೆ ಸೇರಿದ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿರುವುದು ತಿಳಿದುಬಂದಿದೆ.
ಆರೋಪಿಯ ಬಂಧನ
ನವೆಂಬರ್ 22 ರಂದು ಮುಂಬೈನಿಂದ ಉತ್ತರಾಖಂಡಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ಮೋಹಿತ್ ಗೋಗಿಯಾನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಆತ ತನ್ನ ಸಹಚರರ ಬಗ್ಗೆ ಮಾಹಿತಿ ನೀಡಿದ್ದಾನೆ. ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಐಷಾರಾಮಿ ಆಸ್ತಿಗಳನ್ನು ಕೊಡಿಸುವುದಾಗಿ ಆಮಿಷ ಒಡ್ಡಿ, ನಕಲಿ ಬ್ಯಾಂಕ್ ಅಡಮಾನ ಮತ್ತು ಹರಾಜು ಪತ್ರಗಳನ್ನು ಸೃಷ್ಟಿಸಿ ಜನರನ್ನು ವಂಚಿಸುವುದು ಈ ಗ್ಯಾಂಗ್‌ನ ಹಾದಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಈ ಗ್ಯಾಂಗ್ ಜನರನ್ನು ವಂಚಿಸಲು ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಐಷಾರಾಮಿ ಆಸ್ತಿಗಳ ಆಫರ್‌ ನೀಡಿ ಜನರನ್ನು ಆಕರ್ಷಿಸಿತು. ಖರೀದಿ ಒಡಂಬಡಿಕೆ ನಿಜವೆಂದು ತೋರಿಸಲು ನಕಲಿ ಬ್ಯಾಂಕ್ ಅಡಮಾನ ಮತ್ತು ಹರಾಜು ಪತ್ರಗಳನ್ನು ತೋರಿಸಲಾಯಿತು. ಹಾಗೂ ಜೊತೆಗೆ ತಕ್ಷಣವೇ ಆಸ್ತಿ ಸ್ವಾಧೀನಕ್ಕೆ ನೀಡುವ ಭರವಸೆಗಳನ್ನು ನೀಡಲಾಗಿತ್ತು.
ಗೋಗಿಯಾ ವಿರುದ್ಧ ದೆಹಲಿ, ಪಂಜಾಬ್, ಗೋವಾ, ಮಧ್ಯಪ್ರದೇಶ ಮತ್ತು ಚಂಡೀಗಢದಲ್ಲಿ ಕನಿಷ್ಠ 16 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂಬಿಯೆನ್ಸ್ ಮಾಲ್ ಬಳಿಯಿರುವ ಆಸ್ತಿಗಳು ಮತ್ತು ದೆಹಲಿ-ಎನ್‌ಸಿಆರ್‌ನ ಇತರ ಪ್ರಮುಖ ಸ್ಥಳಗಳಲ್ಲಿಯೂ ಇದೇ ರೀತಿಯ ವಂಚನೆ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಸ್ತುತ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗಾಗಿ ಮತ್ತು ವಂಚನೆಗೊಳಗಾದ ಹಣವನ್ನು ವಸೂಲಿ ಮಾಡಲು ಕ್ರೈಮ್ ಬ್ರಾಂಚ್ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement