ಮುಂಡಗೋಡ | ಡಿಜಿಟಲ್ ಅರೆಸ್ಟ್ ; 1.61 ಕೋಟಿ ರೂ. ಕಳೆದುಕೊಂಡ ನಿವೃತ್ತ ಶಿಕ್ಷಕ…..!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ 72 ವರ್ಷದ ನಿವೃತ್ತ ಟಿಬೆಟಿಯನ್‌ ಶಿಕ್ಷಕರೊಬ್ಬರು ಸೈಬರ್ ಅಪರಾಧಿಗಳ ಕುತಂತ್ರಕ್ಕೆ ಬಲಿಯಾಗಿ ಹಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆನ್‌ಲೈನ್‌ ವಂಚಕರು ಅವರನ್ನು ಹೆದರಿಸಿ, “ಡಿಜಿಟಲ್ ಅರೆಸ್ಟ್” ಮಾಡಿ, ಅವರಿಂದ ಬರೋಬ್ಬರಿ 1.61 ಕೋಟಿ ರೂಪಾಯಿಯನ್ನು ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ.
ಮೋದ ಹೋದವರನ್ನು ಮುಂಡಗೋಡಿನ ಟಿಬೆಟಿಯನ್ ಕಾಲೋನಿ ನಿವಾಸಿ ಪಾಲ್ಡೆನ್ ಚೋಡಕ್ ಎಂದು ಹೇಳಲಾಗಿದೆ. ನವೆಂಬರ್ 29 ರಂದು ಇವರಿಗೆ ಅಪರಿಚಿತ ವ್ಯಕ್ತಿಯೊಬ್ಬರಿಂದ ವಾಟ್ಸಾಪ್ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ತಾನು ಮಹಾರಾಷ್ಟ್ರದ ಕೊಲಾಬಾ ಪೊಲೀಸ್ ಠಾಣೆಯ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ.

ನಡೆದದ್ದು ಹೇಗೆ?  
ವಂಚಕರು ಪೊಲೀಸ್ ಸಮವಸ್ತ್ರ ಧರಿಸಿ ವೀಡಿಯೊ ಕಾಲ್ ಮಾಡುವ ಮೂಲಕ ಚೋಡಕ್ ಅವರು ತಮ್ಮನ್ನು ನಂಬುವಂತೆ ಮಾಡಿದ್ದಾರೆ. ಭಯೋತ್ಪಾದನೆಯ ಸುಳ್ಳು ಆರೋಪ ಹೊರಿಸಿದ ವಂಚಕರು ಮುಂಬೈನಲ್ಲಿ ಬಂಧಿತನಾಗಿರುವ ಅಬ್ದುಲ್ ಸಲಾಮ್ ಎಂಬ ಭಯೋತ್ಪಾದಕನ ಬಳಿ ಚೋಡಕ್ ಹೆಸರಿನ ಕೆನರಾ ಬ್ಯಾಂಕ್ ಎಟಿಎಂ ಕಾರ್ಡ್ ಪತ್ತೆಯಾಗಿದೆ ಎಂದು ಹೆದರಿಸಿದ್ದರು. ಅಲ್ಲದೆ, ನಿಮ್ಮ ಖಾತೆಯಿಂದ ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಬೆದರಿಕೆ ಹಾಕಿದ್ದರು.
ಚೋಡಕ್ ಅವರನ್ನು ಮನೆಯಲ್ಲೇ “ಡಿಜಿಟಲ್ ಅರೆಸ್ಟ್” ಹೆಸರಿನಲ್ಲಿ ಬಂಧಿಯಾಗಿರಿಸಿದ್ದರು. ಫೋನ್ ಸ್ವಿಚ್ ಆಫ್ ಮಾಡಬಾರದು ಮತ್ತು ಈ ವಿಷಯವನ್ನು ಯಾರಿಗೂ ಹೇಳಬಾರದು, ಹೇಳಿದರೆ ದೇಶದ್ರೋಹದ ಕೇಸ್ ದಾಖಲಿಸುವುದಾಗಿ ಅವರಿಗೆ ಹೆದರಿಸಿದ್ದರು. ಪ್ರತಿ ಎರಡು ಗಂಟೆಗೊಮ್ಮೆ ಮೆಸೇಜ್ ಮಾಡುವಂತೆ ಸೂಚಿಸಿದ್ದರು.

ಪ್ರಮುಖ ಸುದ್ದಿ :-   ಹೊನ್ನಾವರದ ಪ್ರಕೃತಿಯ ‘ಮಾಯಾಲೋಕ’ಕ್ಕೆ ಆನಂದ ಮಹೀಂದ್ರಾ ಫಿದಾ ! ಕೇರಳದ ಹಿನ್ನೀರಿನಷ್ಟೇ ಸುಂದರ ಎಂದ ಉದ್ಯಮಿ

ಹಣ ವರ್ಗಾವಣೆ
ತನಿಖೆಯ ನೆಪದಲ್ಲಿ ನಿಮ್ಮ ಹಣವನ್ನು “ರಾಷ್ಟ್ರೀಯ ನಿಧಿ”ಗೆ (National Fund) ವರ್ಗಾಯಿಸಿ, ತನಿಖೆ ಮುಗಿದ ನಂತರ ಮರಳಿಸುವುದಾಗಿ ನಂಬಿಸಿದ್ದರು. ಭಯಭೀತರಾದ ಚೋಡಕ್ ತಮ್ಮ ಫಿಕ್ಸೆಡ್ ಡಿಪಾಸಿಟ್ ಹಣ ಹಾಗೂ ಸ್ನೇಹಿತರಿಂದ ಸಾಲ ಪಡೆದು ಒಟ್ಟು 1,61,00,047 ರೂಪಾಯಿಗಳನ್ನು ವಂಚಕರ ಖಾತೆಗೆ ಹಂತ ಹಂತವಾಗಿ ವರ್ಗಾಯಿಸಿದ್ದರು.
ಹಣ ವರ್ಗಾವಣೆಯಾದ ನಂತರ ವಂಚಕರು ಕರೆ ಸ್ವೀಕರಿಸುವುದನ್ನು ನಿಲ್ಲಿಸಿದಾಗ, ತಾವು ಮೋಸ ಹೋಗಿರುವುದು ಚೋಡಕ್ ಅವರಿಗೆ ಅರಿವಿಗೆ ಬಂದಿದೆ. ತಕ್ಷಣ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 

ಎಚ್ಚರಿಕೆ ವಹಿಸಿ… 
ಇತ್ತೀಚಿನ ದಿನಗಳಲ್ಲಿ ಸೈಬರ್ ಕಳ್ಳರು ಬಳಸುತ್ತಿರುವ ಅತ್ಯಂತ ಅಪಾಯಕಾರಿ ತಂತ್ರವಿದು. ಇವರು ಹೆಚ್ಚಾಗಿ ಹಿರಿಯ ನಾಗರಿಕರು ಮತ್ತು ನಿವೃತ್ತರನ್ನು ಗುರಿಯಾಗಿಸಿಕೊಳ್ಳುತ್ತಾರೆ.
ಪೊಲೀಸ್, ಸಿಬಿಐ ಅಥವಾ ಇಡಿ ಅಧಿಕಾರಿಗಳಂತೆ ನಟಿಸಿ ವಿಡಿಯೋ ಕಾಲ್ ಮಾಡುತ್ತಾರೆ. ಅಕ್ರಮ ಹಣ ವರ್ಗಾವಣೆ ಅಥವಾ ಡ್ರಗ್ಸ್ ಪ್ರಕರಣದಲ್ಲಿ ನಿಮ್ಮ ಹೆಸರಿದೆ ಎಂದು ಹೆದರಿಸಿ, ಮನೆಯಿಂದ ಹೊರಹೋಗದಂತೆ ಅಥವಾ ಯಾರಿಗೂ ಫೋನ್ ಮಾಡದಂತೆ ನಿರ್ಬಂಧ ಹೇರುತ್ತಾರೆ. ನಂತರ ಭಯ ಬಿದ್ದ ವ್ಯಕ್ತಿಯಿಂದ “ವೆರಿಫಿಕೇಶನ್” ಹೆಸರಿನಲ್ಲಿ ತಮ್ಮ ಖಾತೆಗಳಿಗೆ ಹಣ ವರ್ಗಾಯಿಸಿಕೊಳ್ಳುತ್ತಾರೆ.

ಪ್ರಮುಖ ಸುದ್ದಿ :-   ಸಾಗರ : ಶಾಲೆಯಲ್ಲಿ ಹೃದಯಾಘಾತದಿಂದ 1ನೇ ತರಗತಿ ವಿದ್ಯಾರ್ಥಿ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement