ಕರ್ನಾಟಕದ ಹೆಚ್ಚಿನ ಜನರಿಗೆ ಎವಿಎಂ ಮೇಲೆ ಅಪಾರ ವಿಶ್ವಾಸ ; ಹೊಸ ಸಮೀಕ್ಷೆಯಲ್ಲಿ ಅನೇಕ ಅಂಶಗಳು ಬಹಿರಂಗ

ಬೆಂಗಳೂರು: ಭಾರತದಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯುತ್ತವೆ ಹಾಗೂ ಇವಿಎಂ (EVM) ಯಂತ್ರಗಳು ನಿಖರವಾದ ಫಲಿತಾಂಶವನ್ನು ನೀಡುತ್ತವೆ ಎಂದು ಕರ್ನಾಟಕದ ಬಹುಪಾಲು ಮತದಾರರು ನಂಬಿದ್ದಾರೆ. ಕರ್ನಾಟಕ ಮೌಲ್ಯಮಾಪನ ಮತ್ತು ಉಸ್ತುವಾರಿ ಪ್ರಾಧಿಕಾರ (Karnataka Monitoring and Evaluation Authority (KMEA)) ನಡೆಸಿದ ಇತ್ತೀಚಿನ ಸಮೀಕ್ಷೆಯಲ್ಲಿ ಈ ಕುತೂಹಲಕಾರಿ ಅಂಶಗಳು ಬಹಿರಂಗಗೊಂಡಿವೆ. ಆಗಸ್ಟ್ 2025 ರ ಸಮೀಕ್ಷೆಯ ವರದಿಯನ್ನು ಇತ್ತೀಚೆಗೆ ಸಾರ್ವಜನಿಕಗೊಳಿಸಲಾಯಿತು.
ಕೆಎಂಇಎ ಯೋಜನೆ, ಪ್ರೊಗ್ರಾಂ ಮಾನಿಟರಿಂಗ್ ಮತ್ತು ಅಂಕಿಅಂಶಗಳ ಇಲಾಖೆಯ (Planning, Programme Monitoring and Statistics Department)ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಪುರಾವೆ ಆಧಾರಿತ ನೀತಿ ನಿರೂಪಣೆಯನ್ನು ಉತ್ತೇಜಿಸುವ ರಾಜ್ಯದ ಉನ್ನತ ಸಂಸ್ಥೆಯಾಗಿದೆ. ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ಜಾರಿಗೆ ತರಲಾದ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ (SVEEP) ಕಾರ್ಯಕ್ರಮದ ಪರಿಣಾಮವನ್ನು ನಿರ್ಣಯಿಸಲು ಈ ಅಧ್ಯಯನವನ್ನು ನಿಯೋಜಿಸಲಾಗಿದೆ.
102 ಕ್ಷೇತ್ರಗಳಾದ್ಯಂತ 5,100 ಜನರಿಂದ ಪ್ರತಿಕ್ರಿಯೆ….
ಬೆಂಗಳೂರು, ಬೆಳಗಾವಿ, ಕಲಬುರಗಿ ಮತ್ತು ಮೈಸೂರಿನ ಆಡಳಿತ ವಿಭಾಗಗಳಲ್ಲಿರುವ 102 ವಿಧಾನಸಭಾ ಕ್ಷೇತ್ರಗಳಲ್ಲಿ 5,100 ಜನರ ಪ್ರತಿಕ್ರಿಯೆಗಳನ್ನು ಒಳಗೊಂಡ ಈ ಸಮೀಕ್ಷೆ ಒಳಗೊಂಡಿದೆ.
ವರದಿಯ ಪ್ರಕಾರ, ವಿಭಾಗಗಳಾದ್ಯಂತ 91.31 ಪ್ರತಿಶತ ಪ್ರತಿಕ್ರಿಯಿಸಿದವರು ಭಾರತದಲ್ಲಿ ಚುನಾವಣೆಗಳು ಮುಕ್ತವಾಗಿ ಮತ್ತು ನ್ಯಾಯಯುತವಾಗಿ ನಡೆಯುತ್ತವೆ ಎಂಬುದಕ್ಕೆ ತಮ್ಮ ಒಪ್ಪಿಗೆ ಸೂಚಿಸಿದ್ದಾರೆ.  6.76 ಪ್ರತಿಶತ ಪ್ರತಿಕ್ರಿಯಿಸಿದವರು ತಟಸ್ಥ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. “ಕಲಬುರಗಿ ವಿಭಾಗದಲ್ಲಿ ವಿಶ್ವಾಸವು ಪ್ರಬಲವಾಗಿತ್ತು, ಅಲ್ಲಿ 84.67 ಪ್ರತಿಶತ ಜನರು ಚುನಾವಣೆಯು ಮುಕ್ತವಾಗಿ ಮತ್ತು ನ್ಯಾಯಯುತವಾಗಿ ನಡೆಯುತ್ತವೆ ಎಂಬುದನ್ನು ಒಪ್ಪಿದ್ದಾರೆ. ಮತ್ತು 10.19 ಪ್ರತಿಶತ ಬಲವಾಗಿ ಒಪ್ಪಿದ್ದಾರೆ, ನಂತರ ಬೆಳಗಾವಿ ವಿಭಾಗದಲ್ಲಿ 69.62 ಪ್ರತಿಶತ ಒಪ್ಪಿದ್ದಾರೆ ಮತ್ತು 19.24 ಪ್ರತಿಶತ ಬಲವಾಗಿ ಒಪ್ಪಿದ್ದಾರೆ. ಮೈಸೂರು ವಿಭಾಗವು ಸಹ ಹೆಚ್ಚಿನ ವಿಶ್ವಾಸವನ್ನು ತೋರಿಸಿದೆ, 72.08 ಪ್ರತಿಶತ ಒಪ್ಪಿದ್ದಾರೆ ಮತ್ತು 15 ಪ್ರತಿಶತ ಬಲವಾಗಿ ಒಪ್ಪಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತಪತ್ರಗಳನ್ನು ಮರಳಿ ತರಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ, ಇವಿಎಂಗಳ ಮೇಲಿನ “ವಿಶ್ವಾಸದ ಕೊರತೆ” ಇದಕ್ಕೆ ಕಾರಣ. ಆದರೆ 2023 ರ ಸಮೀಕ್ಷೆಯಲ್ಲಿ 77.9%ರಷ್ಟು ಜನರು ಎವಿಎಂಗಳ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದರೆ ಈಗ 83.61%ರಷ್ಟು ಜನರು ಅದರ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದು ಎವಿಎಂಗಳ ಮೇಲೆ ಜನರ ವಿಶ್ವಾಸ ಹೆಚ್ಚುತ್ತಿರುವುದನ್ನು ಸೂಚಿಸಿದೆ. ಹೆಚ್ಚಿನ ನಾಗರಿಕರು ಇವಿಎಂಗಳನ್ನು ನಂಬಿದ್ದಾರೆ ಎಂದು ಹೇಳಿದೆ,
5,100 ಪ್ರತಿಕ್ರಿಯಿಸಿದವರಲ್ಲಿ, 95.75% ಜನರು 2024 ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದೇವೆ ಎಂದು ಹೇಳಿದ್ದಾರೆ.
ಶೇ. 95.44 ರಷ್ಟು ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸರಿಯಾಗಿ ನಮೂದಾಗಿದೆ ಎಂದು ದೃಢಪಡಿಸಿದ್ದಾರೆ.
ಚುನಾವಣೆಯಲ್ಲಿ ಹಣದ ಪ್ರಭಾವ ಹೆಚ್ಚುತ್ತಿದೆ ಎಂದು ಸುಮಾರು 49.5% ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ಮೈಸೂರು ಮೂಲದ GRAAM (ಗ್ರಾಸ್‌ರೂಟ್ಸ್ ರಿಸರ್ಚ್ ಅಂಡ್ ಅಡ್ವೊಕಸಿ ಮೂವ್‌ಮೆಂಟ್) ಈ ಸಮೀಕ್ಷೆಯನ್ನು ನಡೆಸಿತು. “
ಮಹಿಳಾ ಮತದಾನದ ಸ್ವಾಯತ್ತತೆ
ಪ್ರತಿಕ್ರಿಯಿಸಿದ 5,100 ಜನರಲ್ಲಿ 56%ರಷ್ಟು ಮಹಿಳೆಯರಾಗಿದ್ದಾರೆ.   ಮಹಿಳೆಯರು ತಾವುಮತದಾನ ಮಾಡುವ ಮೊದಲು ಯಾರಿಗೆ ಮತ ಹಾಕಬೇಕು ಎಂಬುದರ ಬಗ್ಗೆ ಪುರುಷ ಸದಸ್ಯರು ಅಥವಾ ಹಿರಿಯರನ್ನು ಸಂಪರ್ಕಿಸುತ್ತಾರೆಯೇ ಅಥವಾ ಸ್ವತಂತ್ರವಾಗಿ ನಿರ್ಧರಿಸುತ್ತಾರೆಯೇ ಎಂಬ ಬಗ್ಗೆ  ಶೇ. 50 ಕ್ಕೂ ಹೆಚ್ಚು ಮಹಿಳೆಯರು ತಾವು ಯಾರಿಗೆ ಮತ ಹಾಕಬೇಕು ಎಂಬುದನ್ನು ಸ್ವತಂತ್ರವಾಗಿ ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ, ಶೇ. 37 ರಷ್ಟು ಮಹಿಳೆಯರು ಇನ್ನೂ ತಾವು ಮನೆಯ ಪುರುಷರ ಅಥವಾ ಹಿರಿಯರ ಸಲಹೆ ಪಡೆಯುವುದಾಗಿ ತಿಳಿಸಿದ್ದಾರೆ.
 ಈ ವರದಿ ಏಕೆ ಮುಖ್ಯ?
ಈ ಸಮೀಕ್ಷೆಯ ವರದಿಯು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುವ ಸಾಧ್ಯತೆಯಿದೆ. ಇದಕ್ಕೆ ಮುಖ್ಯ ಕಾರಣಗಳೆಂದರೆ ಬ್ಯಾಲೆಟ್ ಪೇಪರ್ ಜಾರಿಗೆ ಸರ್ಕಾರದ ನಿರ್ಧಾರ. ಇವಿಎಂ ಮೇಲೆ ಜನರಿಗೆ ನಂಬಿಕೆ ಇಲ್ಲ ಎಂಬ ಕಾರಣ ನೀಡಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸುವ ಬಗ್ಗೆ ಪ್ರಸ್ತಾಪಿಸಿದೆ.  ಆದರೆ ಸರ್ಕಾರದ ಅಂಗಸಂಸ್ಥೆಯೇ ನೀಡಿರುವ ಈ ವರದಿ, ಜನರ ನಂಬಿಕೆ ಇವಿಎಂ ಮೇಲೆ ಹೆಚ್ಚಿದೆ ಎಂದು ಹೇಳುತ್ತಿದೆ.
ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ದೇಶಾದ್ಯಂತ ‘ವೋಟ್ ಚೋರಿ’ ಮತ್ತು ಇವಿಎಂ ವಿರುದ್ಧ ಅಭಿಯಾನ ನಡೆಸುತ್ತಿರುವ ಬೆನ್ನಲ್ಲೇ ಈ ವರದಿ ಪ್ರಕಟವಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement