ನರ್ಮದಾ ನದಿ ತೀರದಲ್ಲಿ 200ಕ್ಕೂ ಹೆಚ್ಚು ಗಿಳಿಗಳ ಸಾವು

ಖರ್ಗ್ವಾನ್: ಮಧ್ಯಪ್ರದೇಶದ ಖರ್ಗ್ವಾನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ನೂರಾರು ಗಿಳಿಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ. ಆರಂಭದಲ್ಲಿ ಇದು ಹಕ್ಕಿ ಜ್ವರದ (Bird Flu) ಆತಂಕ ಮೂಡಿಸಿತ್ತಾದರೂ, ಮರಣೋತ್ತರ ಪರೀಕ್ಷೆಯ ವರದಿಯು ಹಕ್ಕಿ ಜ್ವರದ ಸಾಧ್ಯತೆಯನ್ನು ತಳ್ಳಿಹಾಕಿದೆ.
ಜಿಲ್ಲಾ ವನ್ಯಜೀವಿ ವಾರ್ಡನ್ ಟೋನಿ ಶರ್ಮಾ ಅವರ ಪ್ರಕಾರ, ಕೆಲವು ಗಿಳಿಗಳು ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಜೀವಂತವಾಗಿದ್ದವು. ಆದರೆ ಅವು ಸೇವಿಸಿದ್ದ ಆಹಾರ ಎಷ್ಟು ವಿಷಪೂರಿತವಾಗಿತ್ತೆಂದರೆ, ಚಿಕಿತ್ಸೆ ಫಲಕಾರಿಯಾಗದೆ ಅಲ್ಪ ಸಮಯದಲ್ಲೇ ಸಾವಿಗೀಡಾಗಿವೆ.
ಪಶುವೈದ್ಯಕೀಯ ಪರೀಕ್ಷೆಗಳಲ್ಲಿ ಹಕ್ಕಿ ಜ್ವರದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಗಿಳಿಗಳ ಜಠರದಲ್ಲಿ ಅಕ್ಕಿ ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ ಎಂದು ಪಶುವೈದ್ಯಾಧಿಕಾರಿ ಡಾ. ಸುರೇಶ ಬಘೇಲ್ ತಿಳಿಸಿದ್ದಾರೆ.

ಸಾರ್ವಜನಿಕರಿಗೆ ನಿರ್ಬಂಧ
ನದಿಯ ಅಕ್ವೆಡಕ್ಟ್ ಸೇತುವೆಯ ಬಳಿ ಪ್ರವಾಸಿಗರು ಹಕ್ಕಿಗಳಿಗೆ ಆಹಾರ ನೀಡುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಈಗ ನಿಷೇಧಿಸಿದ್ದಾರೆ. ಈ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪಶುವೈದ್ಯೆ ಡಾ. ಮನೀಶಾ ಚೌಹಾಣ ಅವರ ಪ್ರಕಾರ, ಜನರು ಅರಿವಿಲ್ಲದೆ ಹಕ್ಕಿಗಳಿಗೆ ನೀಡುವ ಅಸಮರ್ಪಕ ಆಹಾರವೇ ಈ ದುರಂತಕ್ಕೆ ಕಾರಣವಾಗಿದೆ. ಹೊಲಗಳಲ್ಲಿ ಕೀಟನಾಶಕ ಸಿಂಪಡಿಸಿದ ಧಾನ್ಯಗಳನ್ನು ಗಿಳಿಗಳು ಸೇವಿಸಿರುವ ಸಾಧ್ಯತೆಯಿದೆ.

ಪ್ರವಾಸಿಗರು ನೀಡುವ ಬೇಯಿಸಿದ ಅಥವಾ ಉಳಿದ ಆಹಾರಗಳು ಹಕ್ಕಿಗಳ ಜೀರ್ಣಾಂಗ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸಿರಬಹುದು. ಹಾಗೂ ನರ್ಮದಾ ನದಿಯ ಕಲುಷಿತ ನೀರು ಕೂಡ ಒಂದು ಕಾರಣವಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಲಾಗಿದೆ. ಪಕ್ಷಿಗಳ ವಿಸೆರಾ (ಒಳಾಂಗಗಳ) ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ವನ್ಯಜೀವಿ ತಂಡಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement