ನವದೆಹಲಿ: ವೆನೆಜುವೆಲಾ ರಾಜಧಾನಿ ಕಾರಕಾಸ್ ಶನಿವಾರ ಬೆಳ್ಳಂಬೆಳಿಗ್ಗೆ ಭೀಕರ ಸ್ಫೋಟದ ಸದ್ದು ಮತ್ತು ಯುದ್ಧ ವಿಮಾನಗಳ ಅಬ್ಬರಕ್ಕೆ ಬೆಚ್ಚಿಬಿದ್ದಿದೆ. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಫೋಟಕ ಘೋಷಣೆಯೊಂದನ್ನು ಮಾಡಿದ್ದಾರೆ.
ವೆನೆಜುವೆಲಾ ಮೇಲೆ ಅಮೆರಿಕ ಸೇನೆ ಭಾರಿ ದಾಳಿ ನಡೆಸಿದ್ದು, ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿರುವ ಟ್ರಂಪ್, ಅಮೆರಿಕದ ಕಾನೂನು ಜಾರಿ ಸಂಸ್ಥೆಗಳ ಸಹಯೋಗದೊಂದಿಗೆ ಮಡುರೊ ಅವರನ್ನು ವಿಮಾನದ ಮೂಲಕ ದೇಶದಿಂದ ಹೊರಕ್ಕೆ ಕರೆತರಲಾಗಿದೆ ಎಂದು ಹೇಳಿದ್ದಾರೆ.
ಅಮೆರಿಕ ದಾಳಿ ನಡೆಸಿದ್ದು ಏಕೆ?
ಈ ದಾಳಿಗೆ ಅಮೆರಿಕ ಪ್ರಮುಖವಾಗಿ ಮೂರು ಕಾರಣಗಳನ್ನು ನೀಡಿದೆ. ವಲಸೆ ಸಮಸ್ಯೆ, ಡ್ರಗ್ಸ್ ಮಾಫಿಯಾ ಮತ್ತು ‘ನಾರ್ಕೋ-ಟೆರರಿಸಂ’ (ಮಾದಕವಸ್ತು ಭಯೋತ್ಪಾದನೆ) ಕಾರಣ ಎಂದು ಅದು ಹೇಳಿದೆ.
ಅಮೆರಿಕದ ಗಡಿಗೆ ಲಕ್ಷಾಂತರ ಅಕ್ರಮ ವಲಸಿಗರು ನುಗ್ಗುತ್ತಿರುವುದಕ್ಕೆ ಮಡುರೊ ಅವರೇ ಕಾರಣ ಎಂದು ಟ್ರಂಪ್ ಆರೋಪಿಸಿದ್ದಾರೆ. ಮಡುರೊ ತಮ್ಮ ದೇಶದ ಜೈಲುಗಳು ಮತ್ತು ಮಾನಸಿಕ ಆಸ್ಪತ್ರೆಗಳನ್ನು ಖಾಲಿ ಮಾಡಿ, ಅಲ್ಲಿನವರನ್ನು ಬಲವಂತವಾಗಿ ಅಮೆರಿಕಕ್ಕೆ ಕಳುಹಿಸುತ್ತಿದ್ದಾರೆ ಎಂದು ಅವರು ಈ ಹಿಂದೆ ದೂರಿದ್ದರು.
ವೆನೆಜುವೆಲಾವು ಕೊಕೇನ್ ಸಾಗಣೆಯ ಪ್ರಮುಖ ಮಾರ್ಗವಾಗಿದೆ ಮತ್ತು ಅಮೆರಿಕದ ‘ಫೆಂಟನಿಲ್’ ಬಿಕ್ಕಟ್ಟಿಗೆ ಮಡುರೊ ಸರ್ಕಾರವೇ ಕಾರಣ ಎಂದು ಟ್ರಂಪ್ ವಾದಿಸಿದ್ದಾರೆ. ಅಲ್ಲದೆ, ಮಡುರೊ ಅವರೇ ‘ಕಾರ್ಟೆಲ್ ಡಿ ಲಾಸ್ ಸೋಲ್ಸ್’ ಎಂಬ ಡ್ರಗ್ಸ್ ಮಾಫಿಯಾದ ನಾಯಕ ಎಂದು ಆರೋಪಿಸಲಾಗಿದೆ.
ಕಾರಕಾಸ್ನಲ್ಲಿ ಏನಾಯಿತು?
ಟ್ರಂಪ್ ನೀಡಿರುವ ಮಾಹಿತಿಯಂತೆ, ಅಮೆರಿಕದ ಪಡೆಗಳು ಅತ್ಯಂತ ಕಡಿಮೆ ಅವಧಿಯಲ್ಲಿ ತೀವ್ರಗತಿಯ ಕಾರ್ಯಾಚರಣೆ ನಡೆಸಿ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರೆಸ್ ಅವರನ್ನು ಸೆರೆಹಿಡಿದಿವೆ. ಕಾರ್ಯಾಚರಣೆಯ ಸಮಯದಲ್ಲಿ ಕಾರಕಾಸ್ನಲ್ಲಿ ಭಾರಿ ಸ್ಫೋಟಗಳು ಸಂಭವಿಸಿದ್ದು, ಮಿಲಿಟರಿ ನೆಲೆಗಳ ಸುತ್ತಮುತ್ತ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಆಕಾಶದಲ್ಲಿ ಅಮೆರಿಕದ ಯುದ್ಧ ವಿಮಾನಗಳು ಹಾರಾಡುತ್ತಿರುವುದು ಕಂಡುಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವೆನೆಜುವೆಲಾ ಪ್ರತಿಕ್ರಿಯೆ
ಈ ದಾಳಿಯನ್ನು ಖಂಡಿಸಿರುವ ವೆನೆಜುವೆಲಾ ಸರ್ಕಾರ, ಅಮೆರಿಕವು ನಾಗರಿಕ ಮತ್ತು ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿದೆ. ತನ್ನ ಬೆಂಬಲಿಗರು ಬೀದಿಗೆ ಇಳಿದು ಹೋರಾಡಬೇಕು ಎಂದು ಕರೆ ನೀಡಿದ್ದು, ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ. ಅಲ್ಲದೆ, ಮಡುರೊ ಎಲ್ಲಿದ್ದಾರೆ ಎಂಬುದಕ್ಕೆ ಅಮೆರಿಕ ಪುರಾವೆ ನೀಡಬೇಕು ಎಂದು ಒತ್ತಾಯಿಸಿದೆ.
ಒತ್ತಡದ ಹಿನ್ನೆಲೆ
ಕಳೆದ ಕೆಲವು ತಿಂಗಳುಗಳಿಂದ ಅಮೆರಿಕವು ಕೆರಿಬಿಯನ್ ಸಮುದ್ರದಲ್ಲಿ ತನ್ನ ನೌಕಾಪಡೆ ಮತ್ತು ವಿಮಾನವಾಹಕ ನೌಕೆ ‘ಯುಎಸ್ಎಸ್ ಜೆರಾಲ್ಡ್ ಆರ್ ಫೋರ್ಡ್’ ಅನ್ನು ನಿಯೋಜಿಸುವ ಮೂಲಕ ವೆನೆಜುವೆಲಾ ಮೇಲೆ ಒತ್ತಡ ಹೇರುತ್ತಿತ್ತು. ಡ್ರಗ್ಸ್ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಹಲವಾರು ಸಣ್ಣ ದೋಣಿಗಳನ್ನು ಹೊಡೆದುರುಳಿಸಲಾಗಿತ್ತು.
ಮಡುರೊ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದು, ವೆನೆಜುವೆಲಾದ ತೈಲ ಸಂಪತ್ತನ್ನು ಲೂಟಿ ಮಾಡಲು ಅಮೆರಿಕ ತನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಸಂಚು ರೂಪಿಸಿದೆ ಎಂದು ಹೇಳುತ್ತಲೇ ಬಂದಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ