ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನಿವಾಸದ ಮೇಲೆ ದಾಳಿ: ಓರ್ವ ವಶಕ್ಕೆ

ವಾಷಿಂಗ್ಟನ್ : ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಓಹಿಯೋದಲ್ಲಿರುವ ನಿವಾಸದ ಮೇಲೆ ಸೋಮವಾರ ದಾಳಿ ನಡೆದಿದ್ದು, ಈ ಸಂಬಂಧ ಓರ್ವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋಗಳಲ್ಲಿ ವ್ಯಾನ್ಸ್ ಅವರ ಮನೆಯ ಕಿಟಕಿ ಗಾಜುಗಳು ಪುಡಿಯಾಗಿರುವುದು ಕಂಡುಬಂದಿದೆ. ಆದರೆ, ಈ ದಾಳಿಯ ಹಿಂದಿನ ಉದ್ದೇಶ ಅಥವಾ ಘಟನೆ ನಡೆದ ನಿಖರ ಕ್ರಮದ ಬಗ್ಗೆ ಅಧಿಕಾರಿಗಳು ಇನ್ನು ಅಧಿಕೃತ ಮಾಹಿತಿ ನೀಡಿಲ್ಲ.
ಮಾಧ್ಯಮ ವರದಿಗಳ ಪ್ರಕಾರ, ಘಟನೆ ನಡೆದ ಸಮಯದಲ್ಲಿ ಜೆಡಿ ವ್ಯಾನ್ಸ್ ಅವರ ಕುಟುಂಬ ಮನೆಯಲ್ಲಿ ಇರಲಿಲ್ಲ. ಈ ಕೃತ್ಯವು ಜೆಡಿ ವ್ಯಾನ್ಸ್ ಅಥವಾ ಅವರ ಕುಟುಂಬವನ್ನು ಗುರಿಯಾಗಿಸಿಕೊಂಡು ಮಾಡಿದ ದಾಳಿಯೇ ಎಂಬ ಬಗ್ಗೆ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ಕುರಿತು ಉಪಾಧ್ಯಕ್ಷ ವ್ಯಾನ್ಸ್ ಅಥವಾ ಶ್ವೇತಭವನದಿಂದ ಇನ್ನು ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ.
ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕದ ಪಡೆಗಳು ರಾಜಧಾನಿ ಕರಾಕಸ್‌ನಲ್ಲಿ ಬಂಧಿಸಿ ನ್ಯೂಯಾರ್ಕ್‌ಗೆ ಕರೆತಂದ ಬೆನ್ನಲ್ಲೇ ಈ ದಾಳಿ ನಡೆದಿದೆ. ಮಡುರೊ ಅವರು ನ್ಯೂಯಾರ್ಕ್‌ನಲ್ಲಿ ವಿಚಾರಣೆ ಎದುರಿಸಲಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.
ಅಮೆರಿಕದ ಈ ಮಿಲಿಟರಿ ಕ್ರಮವನ್ನು ಜೆಡಿ ವ್ಯಾನ್ಸ್ ಸಮರ್ಥಿಸಿಕೊಂಡಿದ್ದಾರೆ. “ವೆನೆಜುವೆಲಾವು ಡ್ರಗ್ಸ್ ಮಾಫಿಯಾದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಮತ್ತು ತನ್ನ ತೈಲ ಸಂಪನ್ಮೂಲಗಳನ್ನು ನಾರ್ಕೋ-ಟೆರರಿಸ್ಟ್ (ಮಾದಕವಸ್ತು ಭಯೋತ್ಪಾದನೆ) ಚಟುವಟಿಕೆಗಳಿಗೆ ಬಳಸುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement