ಚಾಕುವಿನಿಂದ ಇರಿದು ಮಹಾರಾಷ್ಟ್ರ ಕಾಂಗ್ರೆಸ್ ಉಪಾಧ್ಯಕ್ಷನ ಹತ್ಯೆ

ಮುಂಬೈ: ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಉಪಾಧ್ಯಕ್ಷ ಹಿದಾಯತ್ ಪಟೇಲ್ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಸಾವಿನಲ್ಲಿ ಅಂತ್ಯಗೊಂಡಿದೆ. ಮಂಗಳವಾರ ಅಕೋಲಾ ಜಿಲ್ಲೆಯ ಅಕೋಟ್ ನಗರದಲ್ಲಿ ದುಷ್ಕರ್ಮಿಯೊಬ್ಬರಿಂದ ಚಾಕು ಇರಿತಕ್ಕೊಳಗಾಗಿದ್ದ ಪಟೇಲ್, ಬುಧವಾರ ಬೆಳಿಗ್ಗೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಅಕೋಲಾ ಪೊಲೀಸ್ ಅಧೀಕ್ಷಕ ಅರ್ಚಿತ್ ಚಂದಕ್ ಅವರ ಮಾಹಿತಿ ಪ್ರಕಾರ, ಮಂಗಳವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಹಿದಾಯತ್ ಪಟೇಲ್ ಅವರು ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದಾಗ ಈ ದಾಳಿ ನಡೆದಿದೆ. ಮಸೀದಿಯೊಳಗೆ ಹೊಂಚು ಹಾಕಿದ್ದ ಉಬೇದ್ ಪಟೇಲ್ (25) ಎಂಬ ಯುವಕ, ಹಿದಾಯತ್ ಅವರಿಗೆ ಚಾಕುವಿನಿಂದ ಹಲವು ಬಾರಿ ಇರಿದು ಪರಾರಿಯಾಗಿದ್ದ. ದಾಳಿಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರಿಗೆ ಸಹಕಾರಿಯಾಗಿದೆ.
ದಾಳಿಯ ನಂತರ ಸಮೀಪದ ಅರಣ್ಯ ಪ್ರದೇಶಕ್ಕೆ ಓಡಿ ಹೋಗಿದ್ದ ಆರೋಪಿಯನ್ನು ಹಿಡಿಯಲು 40 ಪೊಲೀಸ್‌ ಸಿಬ್ಬಂದಿ ಬೃಹತ್ ಕಾರ್ಯಾಚರಣೆ ನಡೆಸಿದ್ದರು. ಮಂಗಳವಾರ ರಾತ್ರಿ 8:30ರ ಸುಮಾರಿಗೆ ಉಬೇದ್‌ನನ್ನು ಬಂಧಿಸಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಇದು ರಾಜಕೀಯ ಪ್ರೇರಿತ ಕೊಲೆಗಿಂತ ಹೆಚ್ಚಾಗಿ ವೈಯಕ್ತಿಕ ದ್ವೇಷ ಮತ್ತು ಕೌಟುಂಬಿಕ ಹಗೆತನದಿಂದ ನಡೆದಿದೆ ಎಂದು ತಿಳಿದುಬಂದಿದೆ.
ತನ್ನ ಕುಟುಂಬದ ಬೆಳವಣಿಗೆಯನ್ನು ಹಿದಾಯತ್ ಪಟೇಲ್ ತಡೆಯುತ್ತಿದ್ದರು ಎಂದು ಆರೋಪಿ ಉಬೇದ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಎಲ್ಲಾ ಆಯಾಮಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗ್ರೀನ್ ಕಾರಿಡಾರ್ ಮೂಲಕ ಸ್ಥಳಾಂತರ:
ಇರಿತಕ್ಕೊಳಗಾದ ನಂತರ ಹಿದಾಯತ್ ಪಟೇಲ್ ಅವರು ಸ್ವತಃ ನಡೆದುಕೊಂಡೇ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ನಂತರ ಅವರ ಸ್ಥಿತಿ ಗಂಭೀರವಾದ ಕಾರಣ, ಹೆಚ್ಚಿನ ಚಿಕಿತ್ಸೆಗಾಗಿ ‘ಗ್ರೀನ್ ಕಾರಿಡಾರ್’ ನಿರ್ಮಿಸಿ ಅಕೋಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದಾಗ ಅವರಿಗೆ ಲಘು ಹೃದಯಾಘಾತ ಸಂಭವಿಸಿದ್ದು, ಬುಧವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಈ ದಾಳಿಗೂ ನೇರ ಸಂಬಂಧವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆದರೂ ಘಟನೆಯ ಹಿಂದೆ ಯಾವುದೇ ಪರೋಕ್ಷ ರಾಜಕೀಯ ಕಾರಣಗಳಿವೆಯೇ ಎಂದು ತನಿಖೆ ಮುಂದುವರಿದಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement