ಬೆಳಗಾವಿ : ಸಕ್ಕರೆ ಕಾರ್ಖಾನೆ ದುರಂತ ; ಮೃತರ ಸಂಖ್ಯೆ 7ಕ್ಕೆ ಏರಿಕೆ

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿ  ಸಕ್ಕರೆ ಕಾರ್ಖಾನೆಯಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿದೆ ಎಂದು ವರದಿಯಾಗಿದೆ.
ಬೈಲಹೊಂಗಲ ತಾಲ್ಲೂಕಿನ ಮರಕುಂಬಿ ಗ್ರಾಮದ ಬಳಿಯ ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ವಾಲ್ ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ ಬಾಯ್ಲರ್ ಸ್ಫೋಟಗೊಂಡಿದ್ದು, ಕುದಿಯುತ್ತಿದ್ದ ಕಬ್ಬಿನ ಹಾಲು ಕಾರ್ಮಿಕರ ಮೈಮೇಲೆ ಬಿದ್ದ ಪರಿಣಾಮ  ಸ್ಥಳದಲ್ಲೇ ಮೂವರು ಕಾರ್ಮಿಕರು ಮೃತಪಟ್ಟಿದ್ದರು, ಮೃತರನ್ನು ಜಮಖಂಡಿಯ ಅಕ್ಷಯ ಚೋಪಡೆ (45), ನೇಸರಗಿಯ ದೀಪಕ ಮುನವಳ್ಳಿ (31), ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿಯ ಸುದರ್ಶನ ಬನೋಶಿ (25) ಎಂದು ಗುರುತಿಸಲಾಗಿದೆ.
ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಗುರುವಾರ ನಾಲ್ವರು ಕಾರ್ಮಿಕರು ಕೊನೆಯುಸಿರೆಳೆದಿದ್ದಾರೆ.
ಮೃತರನ್ನು ಬೈಲಹೊಂಗಲ ತಾಲೂಕಿನ ಅರವಳ್ಳಿ ನಿವಾಸಿ ಮಂಜುನಾಥ ಮಡಿವಾಳಪ್ಪ ಕಾಜಗಾರ, ಗೋಕಾಕ ತಾಲೂಕಿನ ಗೊಡಚಿನಮಲ್ಕಿ ಗ್ರಾಮದ ಭರತ ಸಾರವಾಡಿ, ಅಥಣಿ ಪಟ್ಟಣದ ತೇರದಾಳ ನಿವಾಸಿ ಮಂಜುನಾಥ ತೇರದಾಳ ಹಾಗೂ ಬಾಗಲಕೋಟೆ ಜಿಲ್ಲೆಯ ಮರೆಗುದ್ದಿ ಗ್ರಾಮದ ಗುರುಪಾದಪ್ಪ ತಮ್ಮನ್ನವರ ಎಂದು ಗುರುತಿಸಲಾಗಿದೆ.
ವರದಿ ಪ್ರಕಾರ, ಕಬ್ಬಿನ ರಸವನ್ನು ಕುದಿಸಲು ಬಳಸುವ 40 ಅಡಿ ಎತ್ತರದ ಪಾತ್ರೆಯಾದ AVCP ನಂ. 1 ರ ದುರಸ್ತಿ ಕಾರ್ಯದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಕಾರ್ಖಾನೆ ಅಧಿಕಾರಿಗಳ ಪ್ರಕಾರ, ದುರಸ್ತಿಗೆ ಮುಂಚಿತವಾಗಿ ಘಟಕವನ್ನು ಮುಚ್ಚಲಾಗಿತ್ತು. ಆದಾಗ್ಯೂ, ಕಾರ್ಮಿಕರು ನಿರ್ವಹಣೆಗಾಗಿ ಕರ್ಫ್ಯೂ ಗೋಡೆಯಿಂದ ನಟ್ ಮತ್ತು ಬೋಲ್ಟ್‌ಗಳನ್ನು ತೆಗೆಯುತ್ತಿದ್ದಾಗ, ಬಿಸಿನೀರು ಇದ್ದಕ್ಕಿದ್ದಂತೆ ವಾಲ್ವ್ ಮೂಲಕ ಚಿಮ್ಮಿ ಕೆಳಗೆ ಕೆಲಸ ಮಾಡುತ್ತಿದ್ದವರ ಮೇಲೆ ಬಿದ್ದಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement