ತೆಹ್ರಾನ್: ಇರಾನ್ನಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ನಡೆಯುತ್ತಿರುವ ರಾಷ್ಟ್ರವ್ಯಾಪಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಹಿಂಸಾಚಾರದಲ್ಲಿ ಇದುವರೆಗೆ ಕನಿಷ್ಠ 538 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಆದರೆ, ಮೃತರ ಸಂಖ್ಯೆ ಇದಕ್ಕಿಂತಲೂ ಅಧಿಕವಾಗಿರುವ ಸಾಧ್ಯತೆಯಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರನ್ನು ಉಲ್ಲೇಖಿಸಿ ಎಪಿ (AP) ಸುದ್ದಿಸಂಸ್ಥೆ ತಿಳಿಸಿದೆ.
ಅಮೆರಿಕ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿ ಸಂಸ್ಥೆಯ ಪ್ರಕಾರ, ಈವರೆಗೆ ಸುಮಾರು 10,600ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ರಾಜಧಾನಿ ತೆಹ್ರಾನ್ ಸೇರಿದಂತೆ ಹಲವು ನಗರಗಳಲ್ಲಿ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಈ ಅಶಾಂತಿಗೆ ಅಮೆರಿಕವೇ ಪ್ರಚೋದನೆ ನೀಡುತ್ತಿದೆ ಎಂದು ಇರಾನ್ ಸರ್ಕಾರ ಆರೋಪಿಸಿದೆ. ಪ್ರತಿಭಟನೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ದೇಶದ ಹಲವು ಭಾಗಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.
ಪ್ರತಿಭಟನಾಕಾರರ ಮಾತು ಕೇಳಲು ಸಿದ್ಧ ಎಂದ ಅಧ್ಯಕ್ಷ
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಮಾತನಾಡಿ, “ಸರ್ಕಾರವು ಪ್ರತಿಭಟನಾಕಾರರ ಅಹವಾಲುಗಳನ್ನು ಕೇಳಲು ಸಿದ್ಧವಿದೆ. ಆದರೆ ಕೆಲವು ದಂಗೆಕೋರರು ಇಡೀ ಸಮಾಜವನ್ನೇ ನಾಶಮಾಡಲು ಯತ್ನಿಸುತ್ತಿದ್ದಾರೆ,” ಎಂದು ಎಚ್ಚರಿಸಿದ್ದಾರೆ. ಇದುವರೆಗೆ ಮೃದು ಧೋರಣೆ ತಳೆದಿದ್ದ ಸುಧಾರಣಾವಾದಿ ನಾಯಕ ಪೆಜೆಶ್ಕಿಯಾನ್, ಈಗ ಕಠಿಣ ನಿಲುವಿಗೆ ಮುಂದಾಗಿರುವುದು ಕಂಡುಬರುತ್ತಿದೆ.
ಒಂದು ವೇಳೆ ಅಮೆರಿಕವು ಇರಾನ್ ಮೇಲೆ ಮಿಲಿಟರಿ ದಾಳಿ ನಡೆಸಿದರೆ, ಅಮೆರಿಕ ಮತ್ತು ಇಸ್ರೇಲ್ ಎರಡೂ ನಮ್ಮ “ಕಾನೂನುಬದ್ಧ ಗುರಿ”ಗಳಾಗಲಿವೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಗಾಲಿಬಾಫ್ ಎಚ್ಚರಿಸಿದ್ದಾರೆ. ಸಂಸತ್ತಿನಲ್ಲಿ ಸಂಸದರು “ಅಮೆರಿಕಕ್ಕೆ ಸಾವು” (Death to America) ಎಂದು ಘೋಷಣೆ ಕೂಗುತ್ತಿದ್ದ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.
“ಇರಾನ್ ಮೇಲೆ ದಾಳಿಯಾದಲ್ಲಿ, ಈ ಪ್ರದೇಶದಲ್ಲಿರುವ ಅಮೆರಿಕದ ಎಲ್ಲಾ ಮಿಲಿಟರಿ ಕೇಂದ್ರಗಳು, ನೆಲೆಗಳು ಮತ್ತು ಹಡಗುಗಳನ್ನು ನಾವು ಗುರಿಯಾಗಿಸುತ್ತೇವೆ. ನಾವು ಕೇವಲ ಪ್ರತಿಕ್ರಿಯೆ ನೀಡಲು ಸೀಮಿತವಾಗುವುದಿಲ್ಲ, ಯಾವುದೇ ಬೆದರಿಕೆಯ ಸೂಚನೆ ಕಂಡುಬಂದರೂ ತಕ್ಷಣ ಕ್ರಮ ಕೈಗೊಳ್ಳುತ್ತೇವೆ,” ಎಂದು ಗಾಲಿಬಾಫ್ ಗುಡುಗಿದ್ದಾರೆ.
ಡೊನಾಲ್ಡ್ ಟ್ರಂಪ್ ಬೆಂಬಲ
ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ್ದಾರೆ. “ಇರಾನ್ ಹಿಂದೆಂದೂ ಕಂಡಿರದ ರೀತಿಯಲ್ಲಿ ಸ್ವಾತಂತ್ರ್ಯದತ್ತ ನೋಡುತ್ತಿದೆ. ಅವರಿಗೆ ಸಹಾಯ ಮಾಡಲು ಅಮೆರಿಕ ಸಿದ್ಧವಾಗಿದೆ,” ಎಂದು ಅವರು ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ