2026 ರ ಮಹಾರಾಷ್ಟ್ರ ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿಯು ರಾಜ್ಯಾದ್ಯಂತ ಅತ್ಯಂತ ಪರಿಣಾಮಕಾರಿ ಮತ್ತು ಬಲಾಢ್ಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದೆ, ಇದರಲ್ಲಿ ಭಾರತದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯಾದ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸೇರಿದೆ.
ಮುಂಬೈನಲ್ಲಿ, ಬಿಜೆಪಿ ಎಲ್ಲಾ ಪಕ್ಷಗಳಿಗಿಂತ ಅತ್ಯಧಿಕ ಸ್ಟ್ರೈಕ್ ರೇಟ್ ದಾಖಲಿಸಿದೆ, ಅದು ಸ್ಪರ್ಧಿಸಿದ 135 ಸ್ಥಾನಗಳಲ್ಲಿ 89 ಸ್ಥಾನಗಳನ್ನು ಗೆದ್ದಿದ್ದು, ಇದು ಶೇಕಡಾ 66 ರ ಯಶಸ್ಸಿನ ಪ್ರಮಾಣವಾಗಿದೆ. ಪಕ್ಷವು ಶೇಕಡಾ 45.39ರಷ್ಟು ಮತಗಳೊಂದಿಗೆ ಮತ ಹಂಚಿಕೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ), ಗರಿಷ್ಠ ಸಂಖ್ಯೆಯ ಸ್ಥಾನಗಳಲ್ಲಿ (160) ಸ್ಪರ್ಧಿಸಿದ್ದರೂ, 65ರಲ್ಲಿ ಜಯ ಗಳಿಸಿತು. ಪಕ್ಷವು ಶೇಕಡಾ 40.62 ರ ಸ್ಟ್ರೈಕ್ ರೇಟ್ ದಾಖಲಿಸಿತು. ಶೇಕಡಾ 32.22 ರ ಸ್ಟ್ರೈಕ್ ರೇಟ್‌ನೊಂದಿಗೆ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ತಾನು ಸ್ಪರ್ಧಿಸಿದ 90 ಸ್ಥಾನಗಳಲ್ಲಿ 29 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಸ್ಪರ್ಧಿಸಿದ್ದ 151 ಸ್ಥಾನಗಳಲ್ಲಿ ಕೇವಲ 24 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಆದರೆ ಎಂಎನ್ಎಸ್ ಮತ್ತು ಎನ್‌ಸಿಪಿಯ ಶರದ್ ಪವಾರ್ ಬಣದಂತಹ ಪಕ್ಷಗಳು ಗಮನಾರ್ಹ ಮತಗಳನ್ನು ಪಡೆಯುವಲ್ಲಿ ವಿಫಲವಾದವು.
ಮುಂಬೈನಲ್ಲಿನ ಮತ ಹಂಚಿಕೆ ಅಂಕಿಅಂಶಗಳು ಸೀಟು ಹಂಚಿಕೆಯನ್ನು ಪ್ರತಿಬಿಂಬಿಸುತ್ತವೆ. ಬಿಜೆಪಿಯ ನಂತರ, ಉದ್ಧವ ಠಾಕ್ರೆ ನೇತೃತ್ವದ ಶಿವಸೇನೆಯು ಶೇಕಡಾ 27.37 ರಷ್ಟು ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದೆ, ಶಿಂಧೆ ನೇತೃತ್ವದ ಶಿವಸೇನೆ ಶೇಕಡಾ 10.28 ಮತ್ತು ಕಾಂಗ್ರೆಸ್ ಶೇಕಡಾ 9.41 ರಷ್ಟು ಮತಗಳನ್ನು ಗಳಿಸಿದೆ. ಎಂಎನ್‌ಎಸ್ ಶೇಕಡಾ 3 ಕ್ಕಿಂತ ಕಡಿಮೆ ಮತಗಳಿಕೆಯ ಪ್ರಮಾಣಕ್ಕೆ ಕುಸಿದಿದ್ದು, ನಗರದಲ್ಲಿ ಅದರ ನಿರಂತರ ಚುನಾವಣಾ ಕುಸಿತವನ್ನು ಅಂಕಿ-ಅಂಶಗಳು ಎತ್ತಿ ತೋರಿಸುತ್ತದೆ.
2017 ರ ಮಹಾನಗರ ಪಾಲಿಕೆ ಚುನಾವಣೆಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಾದ್ಯಂತ ಬಿಜೆಪಿಯ ಬೆಳೆಯುತ್ತಿರುವ ಪ್ರಾಬಲ್ಯವನ್ನು ಮತ್ತಷ್ಟು ಈ ಚುನಾವಣೆ ಮತ್ತಷ್ಟು ಬಲಪಡಿಸಿರುವುದನ್ನು ಈ ಚುನಾವಣೆ ತೋರಿಸಿದೆ. 2017ರಲ್ಲಿ ಬಿಜೆಪಿಯು 1,125 ಸ್ಥಾನಗಳಲ್ಲಿ ಜಯಗಳಿಸಿತ್ತು. 2026 ರಲ್ಲಿ 1,425 ಸ್ಥಾನಗಳಲ್ಲಿ ಜಯಗಳಿಸಿದೆ. 2017ರಲ್ಲಿ ಅವಿಭಜಿತ ಶಿವಸೇನೆಯ ಒಟ್ಟು 501 ಸ್ಥಾನಗಳಲ್ಲಿ ಜಯಗಳಿಸಿತ್ತು. ಈ ಸಲದ ಚುನಾವಣೆಯಲ್ಲಿ ಶಿವಸೇನೆಯ ಶಿಂಧೆ ಬಣ (399) ಮತ್ತು ಯುಬಿಟಿ (154) ಸ್ಥಾನಗಳಲ್ಲಿ ಜಯಗಳಿಸಿವೆ.
2017 ರಲ್ಲಿ ಕಾಂಗ್ರೆಸ್ 486 ಸ್ಥಾನಗಳಿದ್ದಿದ್ದು ಈ ಬಾರಿ 324ಕ್ಕೆ ಇಳಿದಿದೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ವು ತೀವ್ರ ಕುಸಿತವನ್ನು ದಾಖಲಿಸಿದೆ, 2017ರಲ್ಲಿ 309 ಸ್ಥಾನಗಳಿಸಿದ್ದ ಪಕ್ಷವು ಈ ಬಾರಿ 167 ಕ್ಕೆ ಕುಸಿದಿದೆ, ಶರದ್ ಪವಾರ್ ಬಣದ ಎನ್‌ಸಿಪಿಯು ಕೇವಲ 36 ಸ್ಥಾನಗಳನ್ನು ಗಳಿಸಿದೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ ತನ್ನ ಗೆಲುವಿನ ಸಂಖ್ಯೆಗಳನ್ನು ಅರ್ಧಕ್ಕೆ ಇಳಿಸಿಕೊಂಡರೆ, ಸ್ವತಂತ್ರರು ನಾಟಕೀಯ ಕುಸಿತ ಕಂಡಿದ್ದಾರೆ.
ಮಹಾರಾಷ್ಟ್ರದಾದ್ಯಂತ ಸ್ಟ್ರೈಕ್-ರೇಟ್ ಡೇಟಾವು ಸಾಂಸ್ಥಿಕ ಬಲದ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ. ಬಿಜೆಪಿ ಸ್ಪರ್ಧಿಸಿದ 2209 ಸ್ಥಾನಗಳಲ್ಲಿ 1425 ಸ್ಥಾನಗಳನ್ನು ಗೆದ್ದು ಶೇ. 64.51ರಷ್ಟು ಯಶಸ್ಸಿನ ದರದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕಾಂಗ್ರೆಸ್ ತನ್ನ ಕಡಿಮೆ ಸಂಖ್ಯೆಯ ಹೊರತಾಗಿಯೂ, ಶೇ. 23.74ರಷ್ಟು ತುಲನಾತ್ಮಕವಾಗಿ ಹೆಚ್ಚಿನ ಸ್ಟ್ರೈಕ್ ರೇಟ್ ಅನ್ನು ದಾಖಲಿಸಿದೆ, ಇದು ಶಿವಸೇನೆ ಮತ್ತು ಎನ್‌ಸಿಪಿ ಎರಡೂ ಬಣಗಳನ್ನು ಮೀರಿಸಿದೆ. ಎಐಎಂಐಎಂ (AIMIM) ಸುಮಾರು ಶೇಕಡಾ 30 ರಷ್ಟು ಸ್ಟ್ರೈಕ್ ರೇಟ್‌ನೊಂದಿಗೆ ಗಮನಾರ್ಹವಾದ ಪ್ರಮುಖ ಪಕ್ಷವಾಗಿ ಹೊರಹೊಮ್ಮಿತು, ಆದರೆ ಆಮ್ ಆದ್ಮಿ ಪಕ್ಷವು ವ್ಯಾಪಕವಾಗಿ ಸ್ಪರ್ಧಿಸಿದರೂ ಒಂದೇ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ