ನವದೆಹಲಿ: ಸ್ವಿಟ್ಜರ್ಲೆಂಡ್ನ ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ (WEF) ಶೃಂಗಸಭೆಯ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಂಬಂಧಗಳ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು ಹಾಗೂ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
“ನನಗೆ ನಿಮ್ಮ ಪ್ರಧಾನಿಯವರ ಮೇಲೆ ಅಪಾರ ಗೌರವವಿದೆ. ಅವರು ಒಬ್ಬ ಅದ್ಭುತ ವ್ಯಕ್ತಿ ಮತ್ತು ನನ್ನ ಆತ್ಮೀಯ ಗೆಳೆಯ” ಎಂದು ಹೇಳಿದ ಟ್ರಂಪ್, “ಭಾರತದ ಜೊತೆ ನಾವು ಶೀಘ್ರದಲ್ಲೇ ಒಂದು ಉತ್ತಮ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.
ಟ್ರಂಪ್ ಅವರ ಈ ಹೇಳಿಕೆಗಳು ಮಹತ್ವ ಪಡೆದಿವೆ, ಏಕೆಂದರೆ ಕಳೆದ ಕೆಲವು ಸಮಯದಿಂದ ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳಲ್ಲಿ ಅನಿಶ್ಚಿತತೆ ಕಂಡುಬಂದಿದೆ.
ರಷ್ಯಾದಿಂದ ತೈಲವನ್ನು ಖರೀದಿಸುತ್ತಿರುವುದಕ್ಕಾಗಿ ಭಾರತದ ರಫ್ತುಗಳ ಮೇಲೆ ಅಮೆರಿಕ ಸುಮಾರು ಶೇ. 50ರಷ್ಟು ಸುಂಕವನ್ನು ವಿಧಿಸಿದೆ. ಇದರಲ್ಲಿ ಅರ್ಧದಷ್ಟು ಸುಂಕವನ್ನು ಟ್ರಂಪ್ “ದಂಡ” ಎಂದು ಕರೆದಿದ್ದಾರೆ. ಸುಂಕಗಳನ್ನು ವಿಧಿಸುವ ಮೊದಲಿನಿಂದಲೂ ಎರಡೂ ದೇಶಗಳ ಅಧಿಕಾರಿಗಳ ನಡುವೆ ವ್ಯಾಪಾರ ಚರ್ಚೆಗಳು ನಡೆಯುತ್ತಿದ್ದರೂ, ಅಂತಿಮ ಒಪ್ಪಂದವನ್ನು ಯಾವಾಗ ಘೋಷಿಸಬಹುದು ಎಂಬುದರ ಕುರಿತು ಸ್ಪಷ್ಟತೆ ಇಲ್ಲ.
ಇತ್ತೀಚೆಗೆ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರು “ಮೋದಿ ಅವರು ಟ್ರಂಪ್ಗೆ ಕರೆ ಮಾಡದ ಕಾರಣ ಒಪ್ಪಂದ ಮುಂದುವರಿದಿಲ್ಲ” ಎಂದು ಹೇಳಿದ್ದರು. ಆದರೆ ಭಾರತ ಈ ಹೇಳಿಕೆಯನ್ನು ತಳ್ಳಿಹಾಕಿದ್ದು, ಇದು ತಪ್ಪು ಮಾಹಿತಿ ಎಂದು ಸ್ಪಷ್ಟಪಡಿಸಿದೆ.
ಅಮೆರಿಕದ ಆರ್ಥಿಕತೆಯ ಬಗ್ಗೆ ಟ್ರಂಪ್ ಹರ್ಷ
ದಾವೋಸ್ನಲ್ಲಿ ಮಾತನಾಡುತ್ತಾ ಟ್ರಂಪ್, ಅಮೆರಿಕವು ಪ್ರಸ್ತುತ ವಿಶ್ವದ “ಆರ್ಥಿಕ ಎಂಜಿನ್” ಆಗಿದೆ ಎಂದು ಬಣ್ಣಿಸಿದರು. ತಮ್ಮ ಆಡಳಿತದಲ್ಲಿ ಹಣದುಬ್ಬರವನ್ನು ಹತೋಟಿಗೆ ತರಲಾಗಿದ್ದು, ಆದಾಯ ಹೆಚ್ಚುತ್ತಿದೆ ಮತ್ತು ದೇಶವು ಐತಿಹಾಸಿಕ ಆರ್ಥಿಕ ಬೆಳವಣಿಗೆಯನ್ನು ಕಾಣುತ್ತಿದೆ ಎಂದು ಅವರು ಪ್ರತಿಪಾದಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ