ಜಾರ್ಖಂಡ್‌ : ತಲೆಗೆ 1 ಕೋಟಿ ರೂ. ಬಹುಮಾನ ಹೊಂದಿದ್ದ ನಕ್ಸಲ್ ನಾಯಕ ಸೇರಿ 15 ಮಾವೋವಾದಿಗಳ ಹತ್ಯೆ

ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆಗಳು ನಡೆಸಿದ ಭೀಕರ ಎನ್‌ಕೌಂಟರ್‌ನಲ್ಲಿ ತಲೆಗೆ 1 ಕೋಟಿ ರೂಪಾಯಿ ಬಹುಮಾನ ಹೊಂದಿದ್ದ ಕುಖ್ಯಾತ ನಕ್ಸಲ್ ನಾಯಕ ಅನಾಲ್ ದಾ ಸೇರಿದಂತೆ 15 ಮಾವೋವಾದಿಗಳು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
 ಸಾರಂಡಾ ಅರಣ್ಯ ಪ್ರದೇಶದ ಕಿರಿಬುರು ಪೊಲೀಸ್ ಠಾಣಾ ವ್ಯಾಪ್ತಿಯ ಕುಮಡಿ ಎಂಬ ಪ್ರದೇಶದಲ್ಲಿ ಈ ಎನ್‌ಕೌಂಟರ್‌ ನಡೆದಿದೆ. ಸಿಆರ್‌ಪಿಎಫ್‌ನ (CRPF) ಸುಮಾರು 1,500 ಕೋಬ್ರಾ (CoBRA) ಕಮಾಂಡೋಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಹತರಾದ ನಕ್ಸಲರಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಪ್ರಧಾನ ಕಚೇರಿಯ ಪ್ರಕಟಣೆಯ ಪ್ರಕಾರ, “ಪತಿರಾಮ ಮಾಝಿ ಅಲಿಯಾಸ್ ಅನಾಲ್ ದಾ ಸೇರಿದಂತೆ 15 ಮಾವೋವಾದಿಗಳ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಗುರುವಾರ ಮುಂಜಾನೆ 6 ಗಂಟೆಗೆ ಆರಂಭವಾದ ಗುಂಡಿನ ಚಕಮಕಿ ಇನ್ನೂ ಮುಂದುವರೆದಿದೆ.
ಯಾರು ಈ ಅನಾಲ್ ದಾ?
ಗಿರಿಡಿ ಜಿಲ್ಲೆಯ ಪೀರ್‌ತಾಂಡ್ ನಿವಾಸಿಯಾದ ಅನಾಲ್ ದಾ, 1987ರಿಂದಲೂ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಕಳೆದ ಹಲವು ವರ್ಷಗಳಿಂದ ಪೊಲೀಸರು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದರು.  ಆತನ ತಲೆಗೆ 1 ಕೋಟಿ ರುಪಾಯಿ ಬಹುಮಾನ  ಘೋಷಿಸಲಾಗಿತ್ತು. ಈತನ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಸಿಕ್ಕ ಬೆನ್ನಲ್ಲೇ ಐಜಿ (ಕಾರ್ಯಾಚರಣೆ) ಮೈಕೆಲ್ ರಾಜ್ ಎಸ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.
ಜಾರ್ಖಂಡ್ ವಿಧಾನಸಭೆಯ ವಿಪಕ್ಷದ ನಾಯಕ ಬಾಬುಲಾಲ ಮರಾಂಡಿ ಅವರು ಈ ಕಾರ್ಯಾಚರಣೆಯನ್ನು “ಕೆಂಪು ಭಯೋತ್ಪಾದನೆಯ” ವಿರುದ್ಧದ ದೊಡ್ಡ ಯಶಸ್ಸು ಎಂದು ಬಣ್ಣಿಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ, ಮಾರ್ಚ್ 2026ರ ವೇಳೆಗೆ ದೇಶದಿಂದ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಲಾಗಿದೆ,” ಎಂದು ಮರಾಂಡಿ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
 ಜಾರ್ಖಂಡ್‌ನಲ್ಲಿ ಕಳೆದ ಎರಡು ದಶಕಗಳಲ್ಲಿ ನಕ್ಸಲ್ ವಿರೋಧಿ ಹೋರಾಟ ತೀವ್ರಗೊಂಡಿದೆ. 11,000ಕ್ಕೂ ಹೆಚ್ಚು ನಕ್ಸರನ್ನು ಬಂಧಿಸಲಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement