ವಾಷಿಂಗ್ಟನ್: ಅಮೆರಿಕದ ಮಿನ್ನೇಸೋಟದಲ್ಲಿ ಐದು ವರ್ಷದ ಬಾಲಕನೊಬ್ಬನನ್ನು ಇಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಈಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಮಾಜಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೇರಿದಂತೆ ಅನೇಕ ನಾಯಕರು ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈಕ್ವೆಡಾರ್ ಮೂಲದ ಲಿಯಾಮ್ ಕೊನೆಜೊ ರಾಮೋಸ್ ಎಂಬ ಬಾಲಕ ಮಂಗಳವಾರ ತನ್ನ ತಂದೆಯೊಂದಿಗೆ ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ, ಶಸ್ತ್ರಸಜ್ಜಿತ ಇಮಿಗ್ರೇಷನ್ (ICE) ಅಧಿಕಾರಿಗಳು ಬಾಲಕನನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಎಸ್‌ಯುವಿ ವಾಹನದಲ್ಲಿ ಕೂರಿಸಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಗು ಭಯಭೀತನಾಗಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
ಕಮಲಾ ಹ್ಯಾರಿಸ್ ಕಿಡಿ: ಈ ಬಗ್ಗೆ ಟ್ವೀಟ್ ಮಾಡಿರುವ ಕಮಲಾ ಹ್ಯಾರಿಸ್, “ಲಿಯಾಮ್ ರಾಮೋಸ್ ಇನ್ನೂ ಪುಟ್ಟ ಮಗು. ಅವನು ತನ್ನ ಕುಟುಂಬದೊಂದಿಗೆ ಮನೆಯಲ್ಲಿ ಇರಬೇಕೇ ಹೊರತು, ಐಸಿಇ (ICE) ಅಧಿಕಾರಿಗಳಿಂದ ಆಮಿಷವಾಗಿ ಬಳಕೆಯಾಗಿ ಟೆಕ್ಸಾಸ್‌ನ ಬಂಧನ ಕೇಂದ್ರದಲ್ಲಿ ಇರಬಾರದು. ಈ ಘಟನೆಯಿಂದ ನನಗೆ ತುಂಬಾ ಆಕ್ರೋಶ ಬಂದಿದೆ,” ಎಂದು ಹೇಳಿದ್ದಾರೆ.
ಮಕ್ಕಳನ್ನು ಬಳಸಿ ಅವರ ತಾಯಿಯನ್ನು ಮನೆಯಿಂದ ಹೊರಗೆ ಬರುವಂತೆ ಮಾಡಲು ಅಧಿಕಾರಿಗಳು ಪ್ರಯತ್ನಿಸಿದರು ಎಂದು ಶಾಲಾ ಮಂಡಳಿಯ ಅಧ್ಯಕ್ಷೆ ಮೇರಿ ಗ್ರಾನ್ಲಂಡ್ ಆರೋಪಿಸಿದ್ದಾರೆ. ನೆರೆಹೊರೆಯವರು ಮತ್ತು ಶಾಲಾ ಅಧಿಕಾರಿಗಳು ಮಗುವನ್ನು ತಮ್ಮ ಜವಾಬ್ದಾರಿಗೆ ನೀಡುವಂತೆ ಕೇಳಿಕೊಂಡರೂ ಅಧಿಕಾರಿಗಳು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಸರ್ಕಾರದ ಸಮರ್ಥನೆ:
ಆದರೆ, ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಇಲಾಖೆಯು ಈ ಆರೋಪಗಳನ್ನು ನಿರಾಕರಿಸಿದೆ. ಮಗುವಿನ ತಂದೆ ಬಂಧನದಿಂದ ತಪ್ಪಿಸಿಕೊಳ್ಳಲು ಓಡಿಹೋಗುವಾಗ ಮಗುವನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು, ಹೀಗಾಗಿ ಮಗುವಿನ ಸುರಕ್ಷತೆಯ ದೃಷ್ಟಿಯಿಂದ ನಾವು ವಶಕ್ಕೆ ಪಡೆದಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ ಅಧಿಕಾರಿಗಳ ಪರವಾಗಿ ಮಾತನಾಡಿದ್ದು, “ಮಗುವನ್ನು ಬಿಟ್ಟು ತಂದೆ ಓಡಿಹೋದಾಗ ಅಧಿಕಾರಿಗಳು ಏನು ಮಾಡಬೇಕಿತ್ತು? ಐದು ವರ್ಷದ ಮಗುವನ್ನು ಚಳಿಯಲ್ಲಿ ಸಾಯಲು ಬಿಡಬೇಕಿತ್ತೇ?” ಎಂದು ಪ್ರಶ್ನಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ