ಶಿರಸಿ: “ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು ಎಂದು ಹೇಳಿಕೊಂಡು ಅಡ್ಡದಾರಿಯಲ್ಲಿ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ನಕಲಿ ಪತ್ರಕರ್ತರನ್ನು ಹೊರಹಾಕಿ, ಸಂಘವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾಗಿರುವುದು ಇಂದಿನ ಅಗತ್ಯ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಟಿಆರ್‌ಸಿ ಸಭಾಭವನದಲ್ಲಿ ಭಾನುವಾರ ನಡೆದ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಡಿ.ವಿ.ಗುಂಡಪ್ಪನವರು ಸ್ಥಾಪಿಸಿದ ಈ ಸಂಘವು ಇಂದು 10 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಬೃಹತ್ ಸಂಸ್ಥೆಯಾಗಿ ಬೆಳೆದಿದೆ. ಪತ್ರಕರ್ತರು ಓದುಗರ ವಿಶ್ವಾಸ ಕಳೆದುಕೊಳ್ಳಬಾರದು ಸಾಮಾಜಿಕ ಜಾಲತಾಣದ ಈ ಯುಗದಲ್ಲಿ ನಂಬಿಕೆ ಕುಸಿಯುತ್ತಿರುವಾಗ, ಸತ್ಯವನ್ನು ಹುಡುಕಿ ತೆಗೆದು ಅದನ್ನು ಜನರಿಗೆ ತಲುಪಿಸುವವರೇ ನಿಜವಾದ ಪತ್ರಕರ್ತರು ಎಂದು ಹೇಳಿದರು.
ಪತ್ರಕರ್ತರಿಗೆ ಬಸ್ ಪಾಸ್ ವಿತರಣೆ ವಿಚಾರದಲ್ಲಿ ನಿಯಮಗಳನ್ನು ಸಡಿಲಗೊಳಿಸುವ ಕುರಿತು ವಾರ್ತಾ ಇಲಾಖೆ ಜೊತೆ ಮಾತುಕತೆ ನಡೆಸಲಾಗಿದೆ. ಅಲ್ಲದೆ, ಶೀಘ್ರದಲ್ಲೇ ಪತ್ರಕರ್ತರಿಗೆ ‘ಮುಖ್ಯಮಂತ್ರಿ ಮಾಧ್ಯಮ ಸಂಜೀವಿನಿ’ ಆರೋಗ್ಯ ಯೋಜನೆಯೂ ಜಾರಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಪಿ. ಲೋಕೇಶ ಮಾತನಾಡಿ, “ಶತಮಾನದ ಇತಿಹಾಸವಿರುವ ನಮ್ಮ ಸಂಘದಲ್ಲಿ ಪತ್ರಕರ್ತರ ಕ್ಷೇಮ ನಿಧಿಗಾಗಿ 1 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಮೀಸಲಿಡಲಾಗಿದೆ. ಸರ್ಕಾರ ನೀಡುವ ಸೌಲಭ್ಯವನ್ನು ಗ್ರಾಮೀಣ ಪತ್ರಕರ್ತರಿಗೂ ಸೌಲಭ್ಯ ವಿಸ್ತರಿಸಲು ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಎಂದು ಹೇಳಿದರು.
ಅತಿಥಿಗಳಾದ ಉದ್ಯಮಿ ಹಾಗೂ ಜೆಡಿಎಸ್ ಮುಖಂಡ ಉಪೇಂದ್ರ ಪೈ ಮಾತನಾಡಿ, ಶಿರಸಿಯ ಬಹುತೇಕ ಪತ್ರಕರ್ತರು ಸತ್ಯವನ್ನೇ ಬರೆಯುತ್ತಿದ್ದಾರೆ. ಆದರೆ ಕೆಲವೇ ಕೆಲವರಿಗೆ ಕಡಿವಾಣದ ಅಗತ್ಯವಿದೆ ಎಂದು ಹೇಳಿದರು. ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ನೂತನ ಜಿಲ್ಲಾಧ್ಯಕ್ಷ ನರಸಿಂಹ ಅಡಿ ಮಾತನಾಡಿ, “ನಕಲಿ ಪತ್ರಕರ್ತರ ಹಾವಳಿ ದೊಡ್ಡ ಸವಾಲಾಗಿದೆ. ಸಂಘವನ್ನು ವ್ಯವಸ್ಥಿತವಾಗಿ ಮುನ್ನಡೆಸಲು ಹಾಗೂ ಪತ್ರಕರ್ತರು ಸರ್ಕಾರ ಮತ್ತು ಸಮಾಜದ ನಡುವೆ ಸೇತುವೆಯಾಗಿ ಕೆಲಸ ಮಾಡಲು ಎಲ್ಲರ ಸಹಕಾರ ಕೋರಿದರು.
ನಿಕಟಪೂರ್ವ ಜಿಲ್ಲಾಧ್ಯಕ್ಷ ಸುಬ್ರಾಯ ಭಟ್ ಬಕ್ಕಳ ಮಾತನಾಡಿ, “ಕಳೆದ 30 ವರ್ಷಗಳ ಅವಧಿಯಲ್ಲಿ ಎಲ್ಲರ ಸಹಕಾರದಿಂದ ಸಂಘವು ಭದ್ರವಾಗಿ ಬೆಳೆದಿದೆ ಎಂದರು.
ಜಿ.ವಿ. ಲೋಕೇಶ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಪತ್ರಕರ್ತರ ಸಂಘದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಿಂಗಪ್ಪ ಚಾವಡಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ವಿಠ್ಠಲದಾಸ ಕಾಮತ್, ಜಿಲ್ಲಾ ಸಂಘದ ಉಪಾಧ್ಯಕ್ಷ ಮಾರುತಿ ನಾಯ್ಕ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಬೆಟ್ಟಕೊಪ್ಪ, ಜನಮಾಧ್ಯಮ ಸಂಪಾದಕ ಶ್ರೀಧರ ಮಂಗಳೂರು, ತತ್ವನಿಷ್ಠ ಸಂಪಾದಕ ಪ್ರವೀಣ ಹೆಗಡೆ ಮೊದಲಾದವರು ಇದ್ದರು. ಸಂಘದ ಉಪಾಧ್ಯಕ್ಷ ಬಸವರಾಜ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು. ಸಂದೇಶ ಭಟ್ ಬೆಳಖಂಡ ವಂದಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ