ಚಂಡೀಗಢ: ವಯಸ್ಸು ಎಂಬುದು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಸಾಬೀತುಪಡಿಸಿದ ಪಂಜಾಬ್ ಪೊಲೀಸ್ ಇಲಾಖೆಯ 80 ವರ್ಷದ ನಿವೃತ್ತ ಡಿಐಜಿ, ಐಪಿಎಸ್ ಇಂದರ್ಜಿತ್ ಸಿಂಗ್ ಸಿಧು ಅವರಿಗೆ ಕೇಂದ್ರ ಸರ್ಕಾರವು ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿಯನ್ನು ಘೋಷಿಸಿದೆ. ಗಣರಾಜ್ಯೋತ್ಸವದ ಮುನ್ನಾದಿನವಾದ ಭಾನುವಾರ ಪ್ರಕಟವಾದ ಪಟ್ಟಿಯಲ್ಲಿ ಇವರ ಹೆಸರು ಪ್ರಮುಖವಾಗಿ ಗಮನ ಸೆಳೆದಿದೆ.
ಇಂದರ್ಜಿತ್ ಸಿಂಗ್ ಸಿಧು ಅವರು 1963ರಲ್ಲಿ ಪೊಲೀಸ್ ಪಡೆಗೆ ಸೇರಿ, 1996ರಲ್ಲಿ ಪಂಜಾಬ್‌ನ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (DIG) ಆಗಿ ನಿವೃತ್ತರಾದವರು. ಪಂಜಾಬ್‌ನಲ್ಲಿ ಭಯೋತ್ಪಾದನೆ ತುತ್ತತುದಿಯಲ್ಲಿದ್ದ 1986ರ ಕಾಲಘಟ್ಟದಲ್ಲಿ ಅವರು ಎಸ್ಪಿಯಾಗಿ (SP) ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದರು. ಆದರೆ ಅವರ ನಿವೃತ್ತಿಯ ನಂತರದ ಬದುಕು ಸಹ ದೇಶಕ್ಕೆ ಮಾದರಿಯಾಗಿದೆ.
ರಸ್ತೆಯಲ್ಲಿನ ಕಸ ತೆಗೆಯುವ ‘ಸದ್ದಿಲ್ಲದ ಯೋಧ’
ನಿವೃತ್ತಿಯ ನಂತರ ಆರಾಮವಾಗಿ ವಿಶ್ರಾಂತಿ ಪಡೆಯುವ ಬದಲು, ಸಿಧು ಅವರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವ ಕಾಯಕಕ್ಕೆ ಇಳಿದರು. ಅವರ ದಿನಚರಿ ಅತ್ಯಂತ ವಿಭಿನ್ನವಾಗಿದೆ.
ಪ್ರತಿ ಬೆಳಿಗ್ಗೆ ಮತ್ತು ಸಂಜೆ ಚಂಡೀಗಢದ ರಸ್ತೆ ಮತ್ತು ಪಾರ್ಕ್‌ಗಳಲ್ಲಿ ಸಂಚರಿಸುವ ಅವರು, ಅಲ್ಲಿ ಬಿದ್ದಿರುವ ಕಸದ ಚೂರುಗಳು, ಪ್ಲಾಸ್ಟಿಕ್ ಬಾಟಲಿಗಳು ಅಥವಾ ಮರದ ಕೊಂಬೆಗಳನ್ನು ಹೆಕ್ಕಿ ತೆಗೆಯುತ್ತಾರೆ. ಪೌರಕಾರ್ಮಿಕರ ಕಸದ ಗಾಡಿಗಳು ಖಾಲಿ ಇದ್ದಾಗ, ತಾವೇ ಅದನ್ನು ತಳ್ಳಿಕೊಂಡು ಹೋಗಿ ರಸ್ತೆಯ ಕಸವನ್ನೆಲ್ಲ ತುಂಬಿಸಿ ನಿಗದಿತ ಜಾಗದಲ್ಲಿ ಅವುಗಳನ್ನು ವಿಲೇವಾರಿ ಮಾಡುತ್ತಾರೆ.
ಆರಂಭದಲ್ಲಿ ಕೆಲವರು ಇವರನ್ನು “ಹುಚ್ಚ” ಎಂದು ಕರೆದಿದ್ದರಂತೆ. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಇಂದರ್ಜಿತ್ ಸಿಂಗ್ ಸಿಧು, “ಸ್ವಚ್ಛತೆ ಎಂಬುದು ಒಳಗಿನಿಂದ ಬರಬೇಕು, ಆಗ ಮಾತ್ರ ರಸ್ತೆಗೆ ಕಸ ಎಸೆಯಲು ಯಾರೂ ಧೈರ್ಯ ಮಾಡುವುದಿಲ್ಲ” ಎನ್ನುತ್ತಾರೆ. ಕಳೆದ ವರ್ಷ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ ಮಹೀಂದ್ರಾ ಅವರು ಸಿಧು ಅವರನ್ನು “ರಸ್ತೆಗಳ ಸದ್ದಿಲ್ಲದ ಯೋಧ” ಎಂದು ಶ್ಲಾಘಿಸಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ