ಉತ್ತರಾಖಂಡದ ಪವಿತ್ರ ಯಾತ್ರಾಸ್ಥಳವಾದ ಗಂಗೋತ್ರಿ ಧಾಮಕ್ಕೆ ಇನ್ನು ಮುಂದೆ ಹಿಂದೂಯೇತರರಿಗೆ ಪ್ರವೇಷ ನಿಷೇಧಿಸಬೇಕು ಎಂದು ಶ್ರೀ ಗಂಗೋತ್ರಿ ದೇವಾಲಯ ಸಮಿತಿಯು ಭಾನುವಾರ ನಡೆದ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಂಡಿದೆ.
ಈ ನಿರ್ಬಂಧವು ಕೇವಲ ಗಂಗೋತ್ರಿ ಧಾಮಕ್ಕೆ ಮಾತ್ರ ಸೀಮಿತವಾಗಿರದೆ, ಗಂಗಾ ಮಾತೆಯ ಚಳಿಗಾಲದ ಆವಾಸ ಸ್ಥಾನವೆಂದು ಕರೆಯಲ್ಪಡುವ ಮುಖ್ಬಾ ಗ್ರಾಮಕ್ಕೂ ಅನ್ವಯಿಸಲಿದೆ ಎಂದು ಸಮಿತಿ ತಿಳಿಸಿದೆ.
ಶ್ರೀ ಗಂಗೋತ್ರಿ ದೇವಾಲಯ ಸಮಿತಿಯ ಅಧ್ಯಕ್ಷ ಸುರೇಶ ಸೆಮ್ವಾಲ್ ಮಾತನಾಡಿ, “ಧಾಮದೊಳಗೆ ಹಿಂದೂಯೇತರರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲು ಸಮಿತಿ ನಿರ್ಧರಿಸಿದೆ. ಚಳಿಗಾಲದ ಅವಧಿಯಲ್ಲಿ ಮುಖ್ಬಾದಲ್ಲಿಯೂ ಇದೇ ನಿಯಮ ಜಾರಿಯಲ್ಲಿರುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಬದರಿನಾಥ್-ಕೇದಾರನಾಥದಲ್ಲೂ ಇದೇ ಹಾದಿ?: ಶ್ರೀ ಬದರಿನಾಥ ಮತ್ತು ಕೇದಾರನಾಥ ದೇವಾಲಯ ಸಮಿತಿಯ ಅಧ್ಯಕ್ಷ ಹೇಮಂತ ದ್ವಿವೇದಿ ಅವರು ಮಾತನಾಡಿ, ಮುಂದಿನ ಮಂಡಳಿ ಸಭೆಯಲ್ಲಿ ಇಂತದ್ದೇ ಪ್ರಸ್ತಾವನೆಯನ್ನು ಮಂಡಿಸಲಾಗುವುದು ಎಂದಿದ್ದಾರೆ. ಈ ಪ್ರಸ್ತಾವನೆಯು ಎರಡೂ ಧಾಮಗಳು ಹಾಗೂ ಸಮಿತಿಯ ಅಡಿಯಲ್ಲಿ ಬರುವ ಎಲ್ಲಾ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ಉದ್ದೇಶ ಹೊಂದಿದೆ.
ಹರಿದ್ವಾರದ ಕುಂಭ ಪ್ರದೇಶದ ಎಲ್ಲಾ ಗಂಗಾ ಘಾಟ್‌ಗಳಲ್ಲಿ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವಂತೆ ಗಂಗಾ ಸಭಾ ಆಗ್ರಹಿಸಿದೆ. ಹರಿ ಕಿ ಪೌರಿ ಸೇರಿದಂತೆ ಸುತ್ತಮುತ್ತಲಿನ ಘಾಟ್‌ಗಳ ಉಸ್ತುವಾರಿ ವಹಿಸಿರುವ ಗಂಗಾ ಸಭಾದ ಅಧ್ಯಕ್ಷ ನಿತಿನ್ ಗೌತಮ, ಈ ಬಗ್ಗೆ ಜಿಲ್ಲಾ ಮಾಹಿತಿ ಅಧಿಕಾರಿಗೆ ಪತ್ರ ಬರೆದಿದ್ದಾರೆ.
“ಸರ್ಕಾರಿ ಇಲಾಖೆ, ಸಂಸ್ಥೆ ಅಥವಾ ಮಾಧ್ಯಮ ಪ್ರತಿನಿಧಿಗಳೇ ಆಗಿರಲಿ, ಕುಂಭ ಪ್ರದೇಶದ ಈ ಪವಿತ್ರ ಸ್ಥಳಗಳಲ್ಲಿ ಹಿಂದೂಯೇತರರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು,” ಎಂದು ನಿತಿನ್ ಗೌತಮ ಒತ್ತಾಯಿಸಿದ್ದಾರೆ.
ಪ್ರಸ್ತುತ ಭಾರಿ ಹಿಮಪಾತ ಮತ್ತು ವಿಪರೀತ ಚಳಿಯ ಕಾರಣದಿಂದಾಗಿ ಗಂಗೋತ್ರಿ ಸೇರಿದಂತೆ ಚಾರ್ ಧಾಮ್‌ಗಳ ಬಾಗಿಲನ್ನು ಮುಚ್ಚಲಾಗಿದೆ. ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಮುಚ್ಚಲ್ಪಡುವ ಈ ಬಾಗಿಲುಗಳು ಮುಂದಿನ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಪುನಃ ತೆರೆಯಲ್ಪಡುತ್ತವೆ. ಈ ಅವಧಿಯಲ್ಲಿ ಭಕ್ತರು ಮುಖ್ಬಾ ಗ್ರಾಮದಲ್ಲಿ ಗಂಗಾ ದೇವಿಗೆ ಪೂಜೆ ಸಲ್ಲಿಸುತ್ತಾರೆ.


ನಿಮ್ಮ ಕಾಮೆಂಟ್ ಬರೆಯಿರಿ