ಇದು ಆಕಸ್ಮಿಕ, ಯಾವುದೇ ಪಿತೂರಿ ಇಲ್ಲ, ; ಅಜಿತ್‌ ಪವಾರ್‌ ಸಾವಿನ ಬಗ್ಗೆ ಶರದ್‌ ಪವಾರ್‌ ಪ್ರತಿಕ್ರಿಯೆ

ಬಾರಾಮತಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬುಧವಾರ ಬೆಳಿಗ್ಗೆ ಸಂಭವಿಸಿದ ವಿಮಾನ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ಈ ಘಟನೆಯ ಬಗ್ಗೆ ಭಾವುಕರಾಗಿ ಪ್ರತಿಕ್ರಿಯಿಸಿದ ಎನ್‌ಸಿಪಿ ಹಿರಿಯ ನಾಯಕ ಶರದ್ ಪವಾರ್, “ಇದು ಕೇವಲ ಆಕಸ್ಮಿಕ, ಇದರಲ್ಲಿ ಯಾವುದೇ ಪಿತೂರಿ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಸಂಸ್ಥೆ ವಿಎಸ್‌ಆರ್ ಏವಿಯೇಷನ್‌ಗೆ ಸೇರಿದ ‘ಬಾಂಬಾರ್ಡಿಯರ್ ಲಿಯರ್‌ಜೆಟ್ 45’ ವಿಮಾನವು ಮುಂಬೈನಿಂದ ಅಜಿತ್ ಪವಾರ್ ಅವರ ತವರು ಬಾರಾಮತಿಗೆ ಪ್ರಯಾಣಿಸುತ್ತಿತ್ತು. ಜಿಲ್ಲಾ ಪಂಚಾಯತ್ ಚುನಾವಣೆ ಪ್ರಚಾರಕ್ಕಾಗಿ ತೆರಳುತ್ತಿದ್ದ ವೇಳೆ, ಬೆಳಿಗ್ಗೆ 8:48 ಸುಮಾರಿಗೆ ರನ್-ವೇ ಸಮೀಪದ ಮುಕ್ತ ಪ್ರದೇಶದಲ್ಲಿ ವಿಮಾನವು ಪತನಗೊಂಡು ಬೆಂಕಿಗೆ ಆಹುತಿಯಾಗಿದೆ. ರನ್-ವೇಯಿಂದ ಕೇವಲ 100 ಮೀಟರ್ ದೂರದಲ್ಲಿರುವಾಗಲೇ ಈ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ದುರಂತದಲ್ಲಿ 66 ವರ್ಷದ ಅಜಿತ್ ಪವಾರ್ ಅವರೊಂದಿಗೆ ಅವರ ವೈಯಕ್ತಿಕ ಭದ್ರತಾ ಅಧಿಕಾರಿ, ಸಹಾಯಕ ಮತ್ತು ಇಬ್ಬರು ಪೈಲಟ್‌ಗಳು ಕೂಡ ಸಾವಿಗೀಡಾಗಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ದೃಢಪಡಿಸಿದೆ.
“ರಾಜಕೀಯ ಬೆರೆಸಬೇಡಿ”: ಶರದ್ ಪವಾರ್ ಮನವಿ
ಘಟನೆಯ ಬಗ್ಗೆ ಸಂಚಿನ ಶಂಕೆ ವ್ಯಕ್ತಪಡಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ತನಿಖೆಗೆ ಒತ್ತಾಯಿಸಿದ್ದರು.
ಆದರೆ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಚಿಕ್ಕಪ್ಪ ಶರದ್‌ ಪವಾರ್‌, “ಇದರಲ್ಲಿ ಯಾವುದೇ ಪಿತೂರಿ ಇಲ್ಲ. ಮಹಾರಾಷ್ಟ್ರ ಒಬ್ಬ ಸಮರ್ಥ ನಾಯಕನನ್ನು ಕಳೆದುಕೊಂಡಿದೆ. ಇದು ತುಂಬಲಾರದ ನಷ್ಟ. ರಾಜಕೀಯ ಆರೋಪಗಳಲ್ಲಿ ಸತ್ಯವಿಲ್ಲ. ದಯವಿಟ್ಟು ಈ ದುರಂತದಲ್ಲಿ ರಾಜಕೀಯ ತರಬೇಡಿ, ಇದನ್ನು ರಅಜಕೀಯಗೊಳಿಸಬೇಡಿ” ಎಂದು ಮನವಿ ಮಾಡಿದ್ದಾರೆ.
ತಾಂತ್ರಿಕ ಕಾರಣ 
ವಿಮಾನಯಾನ ಸಚಿವ ಕೆ. ರಾಮಮೋಹನ ನಾಯ್ಡು ಅವರು ಪುಣೆಯಲ್ಲಿ ಮಾತನಾಡಿ, ” ಕಳಪೆ ಹವಾಮಾನದಿಂದ ಕಡಿಮೆ ಗೋಚರತೆಯ(Poor Visibility) ಕಾರಣದಿಂದಾಗಿ ವಿಮಾನ ಪತನಗೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ. ವಿಮಾನವು ಲ್ಯಾಂಡಿಂಗ್‌ಗೆ ಮುನ್ನ ‘ಗೋ-ಅರೌಂಡ್’ (Go-around) ಪ್ರಕ್ರಿಯೆಗೆ ಯತ್ನಿಸಿತ್ತು, ಆದರೆ ಎಟಿಸಿ (ATC) ಸೂಚನೆಗಳಿಗೆ ಮರು ಪ್ರತಿಕ್ರಿಯೆ ನೀಡುವ ಮೊದಲೇ ಅಪಘಾತ ಸಂಭವಿಸಿದೆ.
ವಿಮಾನಯಾನ ಸಂಸ್ಥೆಯ ಮಾಲೀಕ ವಿ.ಕೆ. ಸಿಂಗ್ ಅವರು ವಿಮಾನವು ಉತ್ತಮ ಸ್ಥಿತಿಯಲ್ಲಿತ್ತು ಮತ್ತು ಯಾವುದೇ ತಾಂತ್ರಿಕ ವೈಫಲ್ಯ ಇರಲಿಲ್ಲ ಎಂದು ತಿಳಿಸಿದ್ದಾರೆ. ಪ್ರಸ್ತುತ ಡಿಜಿಸಿಎ (DGCA) ಮತ್ತು ಎಎಐಬಿ (AAIB) ತಂಡಗಳು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿವೆ.
ಅಜಿತ್ ಪವಾರ್ ರಾಜಕೀಯ ಜೀವನ:
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಬಾರಿ (6 ಬಾರಿ) ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದಾಖಲೆ ಇವರದ್ದಾಗಿದೆ. ಪೃಥ್ವಿರಾಜ ಚವಾಣ, ದೇವೇಂದ್ರ ಫಡ್ನವಿಸ್, ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಅವರ ಸಂಪುಟಗಳಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಿಸಿದ್ದರು.
2023 ರಲ್ಲಿ ಶರದ್ ಪವಾರ್ ಅವರಿಂದ ದೂರವಾಗಿ ಬಿಜೆಪಿಯೊಂದಿಗೆ ಕೈಜೋಡಿಸಿದ್ದರು.
ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯು ಪೂರ್ಣ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ. ಅವರು ಪತ್ನಿ ಸುನೇತ್ರಾ ಪವಾರ್ ಮತ್ತು ಇಬ್ಬರು ಪುತ್ರರಾದ ಜಯ್ ಮತ್ತು ಪಾರ್ಥ ಪವಾರ್ ಅವರನ್ನು ಅಗಲಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement