ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ. ರಾಯ್ ಆತ್ಮಹತ್ಯೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆ ‘ಕಾನ್ಫಿಡೆಂಟ್ ಗ್ರೂಪ್’ (Confident Group) ಅಧ್ಯಕ್ಷರಾದ ಸಿ.ಜೆ. ರಾಯ್ (CJ Roy) ಅವರು ಶುಕ್ರವಾರ (ಜನವರಿ 30) ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ತಮ್ಮ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 ಸ್ಥಳಕ್ಕೆ ಅಶೋಕನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.   ಮಾಹಿತಿ ಪ್ರಕಾರ, ಐಟಿ (ಆದಾಯ ತೆರಿಗೆ) ಇಲಾಖೆಯ ಅಧಿಕಾರಿಗಳು ರಾಯ್ ಅವರ ಕಚೇರಿಯ ಮೇಲೆ ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಮಧ್ಯಾಹ್ನದ ವೇಳೆಗೆ ರಿಚ್‌ಮಂಡ್ ರಸ್ತೆಯ ಕಚೇರಿಗೆ ಬಂದಿದ್ದ ರಾಯ್, ತಮ್ಮಲ್ಲಿದ್ದ ಪರವಾನಗಿ ಪಡೆದ ಗನ್ನಿಂದ ಶೂಟ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ತಕ್ಷಣವೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಹಾಗೂ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.
ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ, “ಕಳೆದ ಎರಡು-ಮೂರು ದಿನಗಳಿಂದ ಐಟಿ ತಂಡವು ಕಚೇರಿಯಲ್ಲಿ ಶೋಧ ಕಾರ್ಯ ನಡೆಸುತ್ತಿತ್ತು. ಕೇರಳದಿಂದ ಬಂದಿದ್ದ ಐಟಿ ತಂಡ ಈ ಕಾರ್ಯಾಚರಣೆಯಲ್ಲಿದೆ. ಸದ್ಯಕ್ಕೆ ರಾಯ್ ಅವರ ಕುಟುಂಬ ಸದಸ್ಯರು ಭಾರತದಲ್ಲಿಲ್ಲ, ಅವರು ವಿಮಾನದ ಮೂಲಕ ಇಂದು ನಗರಕ್ಕೆ ಆಗಮಿಸಲಿದ್ದಾರೆ. ನಾವು ಅವರೊಂದಿಗೆ ಸಂಪರ್ಕದಲ್ಲಿದ್ದೇವೆ,” ಎಂದು ತಿಳಿಸಿದ್ದಾರೆ.
ಸಿ.ಜೆ. ರಾಯ್ ಅವರ ಸಹೋದರ ಬಾಬು ಅವರು ಮಲಯಾಳಂ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡುತ್ತಾ, “ಐಟಿ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ರಾಯ್ ಅವರಿಗೆ ತುಂಬಾ ತೊಂದರೆ ನೀಡುತ್ತಿದ್ದರು” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಿ.ಜೆ. ರಾಯ್ ಮತ್ತು ಕಾನ್ಫಿಡೆಂಟ್ ಗ್ರೂಪ್:
 ಕರ್ನಾಟಕ ಮತ್ತು ಕೇರಳ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಕಾನ್ಫಿಡೆಂಟ್ ಗ್ರೂಪ್  ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪ್ರಬಲವಾಗಿ ಗುರುತಿಸಿಕೊಂಡಿದೆ.
 ತೆರಿಗೆಗೆ ಸಂಬಂಧಿಸಿದಂತೆ ಕಾನ್ಫಿಡೆಂಟ್ ಪ್ರಾಜೆಕ್ಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಐಟಿ ಇಲಾಖೆಯೊಂದಿಗೆ ಕರ್ನಾಟಕ ಹೈಕೋರ್ಟ್ ಮತ್ತು ಐಟಿ ಅಪ್ಪೆಲೇಟ್ ಟ್ರಿಬ್ಯುನಲ್‌ನಲ್ಲಿ ದೀರ್ಘಕಾಲದ ಕಾನೂನು ಹೋರಾಟ ನಡೆಸುತ್ತಿತ್ತು.
ಕೇರಳದ ಕೊಚ್ಚಿ ಮೂಲದವರಾದ ರಾಯ್ ಅವರು ಮಲಯಾಳಂ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದರು. ಮೋಹನಲಾಲ ನಟನೆಯ ಬಿಗ್ ಬಜೆಟ್ ಸಿನಿಮಾ ‘ಕ್ಯಾಸನೋವಾ’ (2012) ಅನ್ನು ಇವರು ನಿರ್ಮಿಸಿದ್ದರು. ಅಲ್ಲದೆ, ಮೋಹನಲಾಲ ನಡೆಸಿಕೊಡುವ ‘ಬಿಗ್ ಬಾಸ್ ಮಲಯಾಳಂ’ ರಿಯಾಲಿಟಿ ಶೋಗೆ ಕಾನ್ಫಿಡೆಂಟ್ ಗ್ರೂಪ್ ಪ್ರಾಯೋಜಕತ್ವವನ್ನೂ ನೀಡಿತ್ತು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement