ದಸರಾ ಆಯುಧ ಪೂಜೆ ವೇಳೆ ಸೀರೆ ಉಟ್ಟು ಎಕೆ-47ನಿಂದ ಗುಂಡು ಹಾರಿಸಿದ ಮಹಿಳಾ ಐಪಿಎಸ್ ಅಧಿಕಾರಿ; ವಿಡಿಯೋ ವೈರಲ್‌

ರಾಯ್ಪುರ: ಛತ್ತೀಸ್‌ಗಢದ ರಾಜನಂದಗಾಂವ ಜಿಲ್ಲೆಯಲ್ಲಿ ದಸರಾ ಹಬ್ಬದ ಅಂಗವಾಗಿ ನಡೆದ ಸಾಂಪ್ರದಾಯಿಕ  ಆಯುಧ  ಪೂಜೆ ವೇಳೆ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಶಸ್ತ್ರಾಸ್ತ್ರಗಳ ಸುರಕ್ಷಿತ ನಿರ್ವಹಣೆ, ಪೊಲೀಸ್ ಇಲಾಖೆಯ ಶಿಸ್ತು ಹಾಗೂ ಇಂತಹ ಆಚರಣೆಗಳ ಸಂದರ್ಭದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಛತ್ತೀಸ್‌ಗಢದ “ಲೇಡಿ ಸಿಂಗಂ” ಎಂದೇ ಹೆಸರುವಾಸಿಯಾಗಿರುವ ರಾಜನಂದಗಾಂವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಂಕಿತಾ ಶರ್ಮಾ ಅವರು ಗುಂಡು ಹಾರಿಸಿರುವುದಕ್ಕೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಇದು ಸಾಂಪ್ರದಾಯಿಕ ಆಚರಣೆಯ ಭಾಗ ಎಂದು ಸಮರ್ಥಿಸಿಕೊಂಡಿದ್ದಾರೆ.
ವಿಜಯದಶಮಿ ಅಂಗವಾಗಿ ಮಂಗಳವಾರ ರಾಜನಂದಗಾಂವ ನಗರದ ಪೊಲೀಸ್ ಲೈನ್ಸ್‌ನಲ್ಲಿ ಸಾಂಪ್ರದಾಯಿಕ ಆಯುಧ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಶಸ್ತ್ರಾಸ್ತ್ರಗಳು ಹಾಗೂ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು. ಈ ವೇಳೆ ಸೀರೆಯುಟ್ಟಿದ್ದ ಎಸ್‌ಪಿ ಅಂಕಿತಾ ಶರ್ಮಾ ಅವರು ಎಕೆ-47 ರೈಫಲ್‌ನಿಂದ ಸತತವಾಗಿ ಹಲವು ಸುತ್ತು ಗುಂಡು ಹಾರಿಸಿರುವುದು ವೈರಲ್ ವಿಡಿಯೊದಲ್ಲಿ ಕಂಡುಬಂದಿದೆ. ಅವರ ಬಳಿಕ ರಾಜನಂದಗಾಂವ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೀರ್ತನ್ ರಾಥೋಡ್ ಅವರೂ ಎಕೆ-47 ರೈಫಲ್‌ನಿಂದ ಗುಂಡು ಹಾರಿಸಿರುವ ಮತ್ತೊಂದು ವಿಡಿಯೊ ಹರಿದಾಡುತ್ತಿದೆ.

ಸರ್ಕಾರದಿಂದ ಘಟನೆಯ ಪರಿಶೀಲನೆ
ಮಹಿಳಾ ಐಪಿಎಸ್ ಅಧಿಕಾರಿ ಅಂಕಿತಾ ಶರ್ಮಾ ಅವರ ಗುಂಡು ಹಾರಿಸುವ ವಿಡಿಯೊದ ಕುರಿತು ಪ್ರತಿಕ್ರಿಯಿಸಿದ ಛತ್ತೀಸ್‌ಗಢದ ಉಪಮುಖ್ಯಮಂತ್ರಿ ಅರುಣ ಸಾವ್, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ತಿಳಿಸಿದ್ದಾರೆ.
ನಿವೃತ್ತ ಐಪಿಎಸ್ ಅಧಿಕಾರಿ ಆರ್.ಕೆ. ವಿಜಯ ಅವರು, ಗುಂಡು ಹಾರಿಸುವುದಾದರೆ ಸುರಕ್ಷಿತ ಸ್ಥಳದಲ್ಲಿ ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಮಾತ್ರ ನಡೆಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. “ಶಸ್ತ್ರಪೂಜೆಯ ಮೂಲ ಉದ್ದೇಶ ಆಯುಧಗಳನ್ನು ಪೂಜಿಸುವುದೇ ಹೊರತು, ಅವುಗಳಿಂದ ಗುಂಡು ಹಾರಿಸುವುದಲ್ಲ. ಇಂತಹ ಗುಂಡು ಹಾರಿಸುವುದರಿಂದ ಅಪಘಾತ ಸಂಭವಿಸುವ ಅಪಾಯವಿದೆ. ಆದ್ದರಿಂದ ಇದನ್ನು ತಪ್ಪಿಸಬೇಕು” ಎಂದು ಅವರು ಹೇಳಿದ್ದಾರೆ.
ಆದರೆ, ರಾಜ್ಯಾದ್ಯಂತ ನಡೆಯುವ ಶಸ್ತ್ರಪೂಜೆಯ ಸಂಪ್ರದಾಯದಲ್ಲಿ ಖಾಲಿ ಗುಂಡುಗಳನ್ನು ಹಾರಿಸುವ ಪದ್ಧತಿಯೂ ಇದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಖಾಲಿ ಗುಂಡುಗಳನ್ನು ಸಾಮಾನ್ಯವಾಗಿ ‘ಆವಾಜಿ ಕಾರ್ಟೂಸ್’ ಎಂದು ಕರೆಯಲಾಗುತ್ತದೆ. ಇಂತಹ ಆಚರಣೆಗಳಲ್ಲಿ ನೈಜ ಗುಂಡುಗಳನ್ನು ಬಳಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಆದರೂ, ಗಾಳಿಯಲ್ಲಿ ಹಾರಿಸಿದ ಗುಂಡು ಮತ್ತೆ ಕೆಳಕ್ಕೆ ಬೀಳುತ್ತದೆ. ಅದು ಸುತ್ತಮುತ್ತಲಿರುವವರಿಗೆ ಗಾಯ ಉಂಟುಮಾಡುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ.

ಶಸ್ತ್ರಾಸ್ತ್ರ ನಿರ್ವಹಣೆಯ ಬಗ್ಗೆ ಮಾಜಿ ಸೇನಾಧಿಕಾರಿಗಳ ಆಕ್ಷೇಪ
ವೈರಲ್ ವಿಡಿಯೊದಲ್ಲಿನ ಶಸ್ತ್ರಾಸ್ತ್ರ ನಿರ್ವಹಣೆಯ ರೀತಿಯ ಬಗ್ಗೆ ಮಾಜಿ ಭಾರತೀಯ ಸೇನಾಧಿಕಾರಿ ಕೆ.ಜೆ. ಧಿಲ್ಲೋನ್ ಅವರು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಲೋಡ್ ಮಾಡಲಾದ ಶಸ್ತ್ರಾಸ್ತ್ರವನ್ನು ಅತ್ಯಂತ ಅಪಾಯಕಾರಿ ಮತ್ತು ತಪ್ಪಾದ ರೀತಿಯಲ್ಲಿ ನಿರ್ವಹಿಸಲಾಗಿದೆ. ಶಸ್ತ್ರಾಸ್ತ್ರ ನಿರ್ವಹಣೆಯ ಸುರಕ್ಷತಾ ನಿಯಮಗಳ ಎಲ್ಲ ಅಂಶಗಳನ್ನೂ ಉಲ್ಲಂಘಿಸಲಾಗಿದೆ. ಗುಂಡು ತುಂಬಿದ ರೈಫಲ್ ಅನ್ನು ಎಲ್ಲ ದಿಕ್ಕುಗಳಿಗೂ ತಿರುಗಿಸಲಾಗಿದೆ. ಹಿನ್ನಲೆಯಲ್ಲಿದ್ದ ಜನರು ಭಯಭೀತರಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅಧಿಕೃತವಲ್ಲದ ಉದ್ದೇಶಕ್ಕಾಗಿ, ಅಧಿಕೃತವಲ್ಲದ ಉಡುಪಿನಲ್ಲಿ ಸೇವಾ ಶಸ್ತ್ರಾಸ್ತ್ರದಿಂದ ಗುಂಡು ಹಾರಿಸಲಾಗಿದೆ. ತರಬೇತಿ ಅಕಾಡೆಮಿಗಳಲ್ಲಿ ಕಲಿಸುವ ಮೂಲಭೂತ ಶಸ್ತ್ರಾಸ್ತ್ರ ನಿರ್ವಹಣಾ ನಿಯಮಗಳನ್ನೂ ಪಾಲಿಸಲಾಗಿಲ್ಲ. ಇಂತಹ ಬೇಜವಾಬ್ದಾರಿಯುತ ವರ್ತನೆಯಿಂದ ಸ್ವತಃ ಅಧಿಕಾರಿಗೇ ಅಥವಾ ಇತರರಿಗೆ ಗಾಯವಾಗಬಹುದು; ಸಾವು ಸಂಭವಿಸುವ ಅಪಾಯವೂ ಇದೆ” ಎಂದು ಅವರು ಬರೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ಸೇನೆಯ ನಿವೃತ್ತ ಅಧಿಕಾರಿ ಕರ್ನಲ್ ದೀಪಕಕುಮಾರ ಎಂದು ಗುರುತಿಸಿಕೊಂಡ ಮತ್ತೊಬ್ಬ ಬಳಕೆದಾರರೂ ಈ ಕೃತ್ಯವನ್ನು ಅಜಾಗರೂಕ ಮತ್ತು ವೃತ್ತಿಪರತೆಯಿಲ್ಲದ ನಡೆ ಎಂದು ಟೀಕಿಸಿದ್ದಾರೆ. ಗುಂಡು ಹಾರಿಸಿದ ಬಳಿಕ ಮಹಿಳಾ ಅಧಿಕಾರಿಯು ರೈಫಲ್ ಅನ್ನು ನಿರ್ವಹಿಸಿದ ರೀತಿಯ ಬಗ್ಗೆಯೂ ಅವರು ಪ್ರಶ್ನೆ ಎತ್ತಿದ್ದಾರೆ. ಇಂತಹ ಸಮಾರಂಭಗಳಲ್ಲಿ ಖಾಲಿ ಗುಂಡುಗಳನ್ನಷ್ಟೇ ಬಳಸಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ.
ಇನ್ನೊಂದೆಡೆ, ಅಂಕಿತಾ ಶರ್ಮಾ ಅವರ ವಿರುದ್ಧದ ಟೀಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿರೋಧವೂ ವ್ಯಕ್ತವಾಗಿದೆ. ಶಸ್ತ್ರಾಸ್ತ್ರ ನಿರ್ವಹಣೆಯಲ್ಲಿ ತಪ್ಪುಗಳಿದ್ದರೆ ಅವುಗಳನ್ನು ಸರಿಪಡಿಸಬೇಕೇ ಹೊರತು, ಆ ಕಾರಣಕ್ಕೆ ಅಧಿಕಾರಿಯ ಒಟ್ಟಾರೆ ವೃತ್ತಿಪರ ಸಾಧನೆಯನ್ನು ಕಡೆಗಣಿಸಬಾರದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
‘ಫಾರ್ಮರ್ ಮೇಜರ್ ಎಲ್.ಎಸ್. ಚೌಧರಿ’ ಎಂಬ ಹೆಸರಿನ ಖಾತೆಯಿಂದ ಮಾಡಲಾದ ಪೋಸ್ಟ್‌ನಲ್ಲಿ, ಅಧಿಕಾರಿಯ ಶಸ್ತ್ರಾಸ್ತ್ರ ನಿರ್ವಹಣೆಯಲ್ಲಿ ಕೆಲವು ತಪ್ಪುಗಳಾಗಿರುವುದನ್ನು ಒಪ್ಪಿಕೊಳ್ಳಲಾಗಿದೆ. ಆದರೆ, ಆ ತಪ್ಪುಗಳನ್ನು ಸರಿಪಡಿಸುವ ಮೂಲಕ ಛತ್ತೀಸ್‌ಗಢದಲ್ಲಿ ಅವರು ಸಲ್ಲಿಸಿರುವ ಸೇವೆಯನ್ನು ಕಡೆಗಣಿಸದೆ ಇರಬೇಕು ಎಂದು ಹೇಳಲಾಗಿದೆ.
ನರೇಂದ್ರ ನೇಗಿ ಎಂಬ ಮತ್ತೊಬ್ಬ ಬಳಕೆದಾರರೂ ಅಂಕಿತಾ ಶರ್ಮಾ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಅವರು ತರಬೇತಿ ಪಡೆದ ಐಪಿಎಸ್ ಅಧಿಕಾರಿ ಎಂಬುದನ್ನು ಟೀಕಾಕಾರರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ. ಅಲ್ಲದೆ, ಅಧಿಕಾರಿಯು ಸೀರೆ ಧರಿಸಿ ರೈಫಲ್‌ನಿಂದ ಗುಂಡು ಹಾರಿಸಿದ್ದನ್ನೇ ಕೆಲವರು ಟೀಕೆಯ ಪ್ರಮುಖ ಅಂಶವನ್ನಾಗಿ ಮಾಡಿಕೊಂಡಿದ್ದಾರೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖ ಸುದ್ದಿ :-   ಸದ್ಯಕ್ಕೆ ವಿರಾಮ : ಪ್ರತಿಭಟನೆಗೆ ಬ್ರೇಕ್ ನೀಡುವಂತೆ ಸಿಜೆಪಿ ಬೆಂಬಲಿಗರಿಗೆ ದೀಪ್ಕೆ ಸಂದೇಶ ನೀಡಲು ಕಾರಣವೇನು ?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement