ಕರ್ನಾಟಕ-ತಮಿಳುನಾಡು ನಡುವಿನ ದಕ್ಷಿಣ ಪಿನಾಕಿನಿ ಜಲ ವಿವಾದ: ನ್ಯಾಯಮಂಡಳಿ ರಚನೆಗೆ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ಕರ್ನಾಟಕ ಮತ್ತು ತಮಿಳುನಾಡು ನಡುವಿನ ಅಂತಾರಾಜ್ಯ ದಕ್ಷಿಣ ಪಿನಾಕಿನಿ (ಪೆನ್ನಾರ್) ನದಿ‌ ನೀರು ಹಂಚಿಕೆ ವಿವಾದ ಇತ್ಯರ್ಥಕ್ಕಾಗಿ ನ್ಯಾಯಮಂಡಳಿ ರಚನೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಆದೇಶಿಸಿದೆ
ಇಂದಿನಿಂದ (ಫೆ.2, 2026) ಒಂದು ತಿಂಗಳ ಒಳಗಾಗಿ ಅಧಿಕೃತ ಗೆಜೆಟ್‌ ಅಧಿಸೂಚನೆ ಹೊರಡಿಸುವಂತೆ ನ್ಯಾಯಮೂರ್ತಿಗಳಾದ ವಿಕ್ರಮನಾಥ ಮತ್ತು ಎನ್ ವಿ ಅಂಜಾರಿಯಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಸೂಚಿಸಿದೆ.
ಕಳೆದ ಡಿಸೆಂಬರ್​​ನಲ್ಲಿ ವಿಚಾರಣೆ ನಡೆಸಿದ್ದ ಕೋರ್ಟ್​​ ತೀರ್ಪನ್ನು ಕಾಯ್ದಿರಿಸಿತ್ತು. ಇದೀಗ 1 ತಿಂಗಳ ಒಳಗೆ ನ್ಯಾಯಾಧಿಕರಣ ರಚನೆ ಮಾಡುವಂತೆ ಆದೇಶಿಸಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ 2018ರಲ್ಲಿ ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೂಲ ದಾವೆ ಹೂಡಿತ್ತು. ನದಿಯ ಮೇಲ್ದಂಡೆ ಭಾಗದಲ್ಲಿ ಕರ್ನಾಟಕ ಸರ್ಕಾರ ಕೈಗೊಂಡ ನಿರ್ಧಾರಗಳಿಂದಾಗಿ ಕೆಳದಂಡೆ ಭಾಗದಲ್ಲಿರುವ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ತಮಿಳುನಾಡು ಸುಪ್ರೀಂ ಕೋರ್ಟ್‌ ಮುಂದೆ ವಾದಿಸಿತ್ತು.

ಎರಡು ರಾಜ್ಯಗಳಸಚಿವರ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಕೇಂದ್ರ ಸರ್ಕಾರ ಈ ಹಿಂದೆ ಸೂಚಿಸಿತ್ತು. ಆದರೆ ಇದನ್ನು ನಿರ್ಧರಿಸಲು ನ್ಯಾಯಮಂಡಳಿ ರಚನೆಯಾಗಬೇಕು ಎಂದು ತಮಿಳುನಾಡು ಒತ್ತಾಯಿಸಿತ್ತು.
ಜನವರಿ 2019ರಲ್ಲಿ, ಈ ಸಂಕೀರ್ಣ ಸಮಸ್ಯೆಯನ್ನು ಪರಿಹರಿಸಲು ನ್ಯಾಯಮಂಡಳಿ ರಚಿಸುವಂತೆ ತಮಿಳುನಾಡು ಸರ್ಕಾರ ಮನವಿ ಸಲ್ಲಿಸಲು ನ್ಯಾಯಾಲಯ ಅನುಮತಿ ನೀಡಿತ್ತು. ನಂತರ ಮೇ ತಿಂಗಳಲ್ಲಿ ಈ ಉದ್ದೇಶಕ್ಕಾಗಿ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಗಡುವು ವಿಸ್ತರಿಸಿತ್ತು.
ಪೆನ್ನಾರ್‌ ಜಲವಿವಾದ ನ್ಯಾಯಮಂಡಳಿ ರಚನೆಗೆ ಸಂಬಂಧಿಸಿದ ಪ್ರಸ್ತಾವನೆಗೆ ಸಚಿವ ಸಂಪುಟ ಕಾರ್ಯದರ್ಶಿ ಮೂಲಕ ಅನುಮೋದನೆಗಾಗಿ ಕಳುಹಿಸಲಾಗಿದ್ದರೂ, ಕೇಂದ್ರ ಸಚಿವ ಸಂಪುಟ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು 2023ರಲ್ಲಿ, ಕೇಂದ್ರ ಜಲಶಕ್ತಿ ಸಚಿವಾಲಯ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಡಿಸೆಂಬರ್ 2025ರಲ್ಲಿ ಕಾಯ್ದಿರಿಸಿತ್ತು.
ಮತ್ತೊಂದೆಡೆ ಕರ್ನಾಟಕ ಮತ್ತು ತಮಿಳುನಾಡು ನಡುವೆ ಹಲವು ದಶಕಗಳಿಂದ ಜೀವಂತ ಇರುವ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಫೆಬ್ರವರಿ 2018ರಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌ ಜಲಸಂಪತ್ತುಗಳು ರಾಷ್ಟ್ರದ ಆಸ್ತಿಯಾಗಿದ್ದು, ಯಾವುದೇ ಒಂದು ರಾಜ್ಯ ಅವುಗಳ ಮೇಲೆ ಏಕಸ್ವಾಮ್ಯ ಸಾಧಿಸುವಂತಿಲ್ಲ ಎಂದಿತ್ತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement