ನವದೆಹಲಿ: ಲೋಕಸಭೆಯಲ್ಲಿ ಬುಧವಾರ ವಿಪಕ್ಷಗಳ ಭಾರಿ ಗದ್ದಲ ಮತ್ತು ಪ್ರತಿಭಟನೆಯಿಂದಾಗಿ, ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಬೇಕಿದ್ದ ಉತ್ತರ ಕೊನೆಯ ಕ್ಷಣದಲ್ಲಿ ರದ್ದಾಗಿದೆ.
ಮಾಜಿ ಭೂಸೇನಾ ಮುಖ್ಯಸ್ಥ ಎಂ.ಎಂ. ನರಾವಣೆ ಅವರ ಪ್ರಕಟವಾಗದ ಆತ್ಮಚರಿತ್ರೆಯ ಆಂಶಗಳನ್ನು ಉಲ್ಲೇಖಿಸಲು ರಾಹುಲ್ ಗಾಂಧಿ ಅವರಿಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ವಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು. ಬುಧವಾರ ಬೆಳಿಗ್ಗೆಯಿಂದಲೇ ಸದನದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಪ್ರಧಾನಿ ಆಸನಕ್ಕೆ ಮುತ್ತಿಗೆ ಹಾಕಿದ ವಿಪಕ್ಷದ ಮಹಿಳಾ ಸಂಸದರು
ಸಂಜೆ 5 ಗಂಟೆಗೆ ಸದನ ಸಮಾವೇಶಗೊಂಡಾಗ, ಪ್ರಧಾನಿ ಮೋದಿ ಅವರು ಮಾತನಾಡಲು ಸಿದ್ಧರಾಗಿದ್ದರು. ಆದರೆ ಈ ವೇಳೆ ವರ್ಷಾ ಗಾಯಕ್ವಾಡ್ ಮತ್ತು ಜ್ಯೋತಿಮಣಿ ಸೇರಿದಂತೆ ಪಕ್ಷದ ಮಹಿಳಾ ಸಂಸದರು ಪ್ರಧಾನಿ ಮೋದಿ ಅವರ ಆಸನ ಸೇರಿದಂತೆ ಆಡಳಿತ ಪಕ್ಷದ ಸದಸ್ಯರ ಆಸನಗಳ ಬಳಿ ತೆರಳಿ ಮುತ್ತಿಗೆ ಹಾಕಿದರು.
“ಸರಿಯಾದುದನ್ನೇ ಮಾಡಿ” (Do what is right) ಎಂಬ ದೊಡ್ಡ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದ ಅವರು, ಬುಧವಾರ ವಿಪಕ್ಷದ ಎಂಟು ಸಂಸದರನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿದರು.
ಮುಂದೂಡಲ್ಪಟ್ಟ ಕಲಾಪ
ಚೀನಾ ಗಡಿ ವಿವಾದ ಮತ್ತು ಸಂಸದರ ಅಮಾನತು ಕುರಿತು ಘೋಷಣೆಗಳನ್ನು ಕೂಗಿದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರ ಪೀಠದಲ್ಲಿದ್ದ ಸಂಧ್ಯಾ ರೈ ಅವರು ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು. ಇದರಿಂದಾಗಿ ವಂದನಾ ನಿರ್ಣಯದ ಮೇಲಿನ ಚರ್ಚೆ ಅಪೂರ್ಣಗೊಂಡಿದ್ದು, ಪ್ರಧಾನಿಯವರ ಭಾಷಣವೂ ಸಾಧ್ಯವಾಗಲಿಲ್ಲ.


ನಿಮ್ಮ ಕಾಮೆಂಟ್ ಬರೆಯಿರಿ