ಉಡುಪಿ: ಕರ್ನಾಟಕದ ಕರಾವಳಿಯ ಯುವಕನೊಬ್ಬನಿಗೆ ರಾತ್ರೋರಾತ್ರಿ ಅದೃಷ್ಟ ಲಕ್ಷ್ಮಿ ಒಲಿದಿದ್ದಾಳೆ. ಯುಎಇಯ ಪ್ರತಿಷ್ಠಿತ ‘ಬಿಗ್ ಟಿಕೆಟ್’ (Big Ticket) ಲಕ್ಕಿ ಡ್ರಾನಲ್ಲಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಮಟ್ಟು ನಿವಾಸಿ ಶಂತನು ಶೆಟ್ಟಿಗಾರ್ ಅವರು ಬರೋಬ್ಬರಿ 20 ಮಿಲಿಯನ್ ದಿರ್ಹಾಮ್ (ಅಂದಾಜು 49 ಕೋಟಿ ರೂಪಾಯಿ) ಬಹುಮಾನ ಗೆದ್ದಿದ್ದಾರೆ.
ಪ್ರಸ್ತುತ ಓಮನ್ನ ರಿಟೇಲ್ ವಲಯದಲ್ಲಿ ಕೆಲಸ ಮಾಡುತ್ತಿರುವ ಅನಿವಾಸಿ ಭಾರತೀಯ ಶಂತನು ಶೆಟ್ಟಿಗಾರ್, ಅಬುಧಾಬಿಯಲ್ಲಿ ನಡೆದ ಸರಣಿ 283ರ ಲಕ್ಕಿ ಡ್ರಾನಲ್ಲಿ 305810 ಸಂಖ್ಯೆಯ ಟಿಕೆಟ್ ಖರೀದಿಸಿದ್ದರು. ಈ ಲೈವ್ ಡ್ರಾ ಪ್ರಸಾರವಾಗುತ್ತಿದ್ದ ಸಂದರ್ಭದಲ್ಲಿ ಆಯೋಜಕರಿಂದ ಬಂದ ಅನಿರೀಕ್ಷಿತ ಫೋನ್ ಕರೆ ಶಂತನು ಅವರ ಜೀವನವನ್ನೇ ಬದಲಿಸಿದೆ. ಸಾವಿರಾರು ಮಂದಿ ವೀಕ್ಷಿಸುತ್ತಿದ್ದ ಕಾರ್ಯಕ್ರಮದಲ್ಲಿ ಈ ಲಕ್ಕಿ ನಂಬರ್ ವಿಜೇತ ಟಿಕೆಟ್ ಎಂದು ಘೋಷಿಸಲಾಯಿತು.
ಗೆಲುವಿನ ಸಂಭ್ರಮ ಹಂಚಿಕೊಂಡ ಶಂತನು
ಲೈವ್ ಕಾರ್ಯಕ್ರಮದಲ್ಲಿ ಆಯೋಜಕರೊಂದಿಗೆ ಮಾತನಾಡಿದ ಶಂತನು, ಗೆಲುವಿಗೆ ಸಂತೋಷ ವ್ಯಕ್ತಪಡಿಸಿದ್ದಾರೆ. “ಈ ಗೆಲುವಿನಿಂದ ನನಗೆ ತುಂಬಾ ಸಂತೋಷವಾಗಿದೆ. ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಏನು ಮಾಡಬೇಕೆಂದು ನಾನು ಇನ್ನು ನಿರ್ಧರಿಸಿಲ್ಲ. ಈ ಟಿಕೆಟನ್ನು ನಾನು ಮತ್ತು ನನ್ನ ಸ್ನೇಹಿತ ಜಂಟಿಯಾಗಿ ಖರೀದಿಸಿದ್ದೆವು. ನಿಯಮದಂತೆ ಬಂದ ಬಹುಮಾನದ ಮೊತ್ತವನ್ನು ನಾವಿಬ್ಬರೂ ಹಂಚಿಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.
ಇದೇ ಲಕ್ಕಿ ಡ್ರಾನಲ್ಲಿ ತಲಾ 1 ಮಿಲಿಯನ್ ದಿರ್ಹಾಮ್ ಗೆದ್ದ ಐವರು ವಿಜೇತರು ಹಾಗೂ ಐಷಾರಾಮಿ ಕಾರಿನ ವಿಜೇತರನ್ನು ಕೂಡ ಘೋಷಿಸಲಾಗಿದೆ. ಈ ಬೃಹತ್ ಮೊತ್ತವನ್ನು ಗೆಲ್ಲುವ ಮೂಲಕ ಶಂತನು ಶೆಟ್ಟಿಗಾರ್ ಬಿಗ್ ಟಿಕೆಟ್ ಇತಿಹಾಸದ ಅತಿದೊಡ್ಡ ವಿಜೇತರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ